ಸಿಂಧನೂರು: ನಗರದ ಪಿ.ಡಬ್ಲ್ಯೂ.ಡಿ. ಕ್ಯಾಂಪ್‌ನಲ್ಲಿರುವ ಸುಕ್ಷೇತ್ರ ಶ್ರೀ ಶಾಂಭವಿ ಪುಣ್ಯಾಶ್ರಮದಲ್ಲಿ ಕ್ರೋಧಿ ನಾಮ ಸಂವತ್ಸರದ ಯುಗಾದಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಧಾರ್ಮಿಕ ಮಹಾಸಭೆಯು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಆಶ್ರಮದ ಪೀಠಾಧಿಪತಿಗಳಾದ ವೇದಮೂರ್ತಿ ವೀರೇಶ ಯಡಿಯೂರುಮಠ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸ್ತರದ ಗಣ್ಯರು ಭಾಗವಹಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಇದೇ ಸುಸಂದರ್ಭದಲ್ಲಿ, ಸಿಂಧನೂರು ನಗರದ ‘ಕಾರುಣ್ಯ ನೆಲೆ’ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಮೂಲಕ ಅನಾಥರಿಗೆ ಮತ್ತು ಹಿರಿಯ ನಾಗರಿಕರಿಗೆ ಆಸರೆಯಾಗಿ ನಿಂತಿರುವ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ವೇದಮೂರ್ತಿ ವೀರೇಶ ಯಡಿಯೂರುಮಠ ಮಹಾಸ್ವಾಮಿಗಳು ಅವರಿಗೆ ಸನ್ಮಾನ ನೆರವೇರಿಸಿ, ಆದಿಶಕ್ತಿ ಶ್ರೀ ಶಾಂಭವಿ ದೇವಿಯ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ವೀರೇಶ ಯಡಿಯೂರುಮಠ ಶ್ರೀಗಳು, “ಹೊಸ ವರ್ಷವು ಎಲ್ಲರ ಬಾಳಿನಲ್ಲಿ ಶಾಂತಿ, ನೆಮ್ಮದಿ ತರಲಿ. ಸಮಾಜದಲ್ಲಿ ನೊಂದವರಿಗೆ ಆಸರೆಯಾಗುವ ಕಾರ್ಯಗಳು ನಿರಂತರವಾಗಿ ನಡೆಯಲಿ. ಡಾ. ಚನ್ನಬಸವ ಸ್ವಾಮಿ ಅವರಂತಹ ಸೇವಾ ಮನೋಭಾವದ ವ್ಯಕ್ತಿಗಳು ನಮ್ಮ ನಾಡಿನ ಆಸ್ತಿ,” ಎಂದು ಶ್ಲಾಘಿಸಿದರು.
ಈ ಧಾರ್ಮಿಕ ಮಹಾಸಭೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಅಯ್ಯನಗೌಡ ಆಯನೂರು, ಪ್ರಮುಖರಾದ ಶಿವಶರಣ ಸ್ವಾಮಿ, ವಾಣಿ ವೀರೇಶ ಯಡಿಯೂರುಮಠ ಸೇರಿದಂತೆ ಪುಣ್ಯಾಶ್ರಮದ ಭಕ್ತಾದಿಗಳು ಹಾಗೂ ನಗರದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *