ರಾಯಚೂರು ಮಾರ್ಚ್ 18 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾಡಳಿತದಿಂದ ಇದೇ ಮಾರ್ಚ್ 31ರ ಮಂಗಳವಾರ ದಂದು ಸರ್ಕಾರದ ಆದೇಶದಂತೆ ಭಗವಾನ್ ಮಹಾವೀರ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾರ್ಚ್ 17ರ ಮಂಗಳವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಗವಾನ್ ಮಹಾವೀರ ಜಯಂತಿ ಕುರಿತು ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಹಾರ ಸಮರ್ಪಣೆ, ಪುಷ್ಪ ನಮನಗಳನ್ನು ಸಲ್ಲಿಸಿದ ಬಳಿಕ ಅಂದು ಬೆಳಿಗ್ಗೆ 08:30ಕ್ಕೆ ನಗರದ ಜೈನ್ ಮಂದಿರದಿಂದ ಮೆರವಣಿಗೆ ಹೊರಟು ಸೂಪರ್ ಮಾರ್ಕೆಟ್, ತೀನ್ ಕಂದಿಲ್, ಬಟ್ಟೆ ಬಜಾರ್, ಮಹಾವೀರ ವೃತ್ತದ ಮುಖಾಂತರ ಜೈನ್ ಮಂದಿರಕ್ಕೆ ಬಂದು ಸೇರಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಜೈನ್ ಮಂದಿರದ ಆರಾಧನ ಸಭಾ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆ ಮತ್ತು ವೇದಿಕೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಭಗವಾನ್ ಮಹಾವೀರ ಅವರ ವೃತ್ತವನ್ನು ಅಲಂಕಾರಗೊಳಿಸಬೇಕು. ವಿದ್ಯುತ್ ದೀಪಾಲಂಕಾರ ಮಾಡಬೇಕು. ಶಾಮಿಯಾನ, ಆಸನಗಳು, ಧ್ವನಿವರ್ಧಕ, ಕುಡಿಯುವ ನೀರು, ರಥದ ಸಿದ್ಧತೆ ಹಾಗೂ ಜೈನ್ ಮಂದಿರ ಸುತ್ತ-ಮುತ್ತ ಸ್ವಚ್ಛತೆ, ಕುಡಿಯುವ ನೀರಿನ ಟ್ಯಾಂಕರ್ ಇತ್ಯಾದಿ ವ್ಯವಸ್ಥೆಗಳನ್ನು ರಾಯಚೂರು ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಶ್ರೀಮತಿ ಪ್ರೇಮಲತಾ ಹರದರೆ ರಾಯಚೂರು ಅವರಿಂದ ಉಪನ್ಯಾಸ ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.
ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಿಷ್ಟಾಚಾರದಂತೆ ಮುದ್ರಿಸಿ ವಿತರಿಸಲು ಸೂಚನೆ ನೀಡಲಾಯಿತು.
ಜಯಂತಿ ಆಚರಣೆಯನ್ನು ಎಲ್ಲಾ ಇಲಾಖೆಗಳಲ್ಲಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದಕ್ಕೂ ಮುಂಚೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಅವರು ಸಭೆಗೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಮಹಾವೀರ ಹಾರದಾರ್, ಅಶೋಕ ಲೋದಾ, ಎಸ್.ಎಸ್.ಜೈನ್ ಸಾವ್, ಗೌತಮಿ ಗಿಯ್, ರಾಜೇಂದ್ರ ಕುಮಾರ್, ಅಶೋಕ ಕುಮಾರ್ ಸಿ.ಕೆ ಜೈನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *