ಲಿಂಗಸಗೂರು, ಮಾ.18 ಕಳೆದ ವರ್ಷ ರಾಜ್ಯಾದ್ಯಂತ ವಾಡಿಕೆಯಿಗಿಂತ ಮಳೆಯಾಗಿದ್ದು, ಹೆಚ್ಚು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ವಿಶೇಷವಾಗಿ ನಾರಾಯಣಪೂರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿರುವ ಹಿನ್ನೆಲೆಯಲ್ಲಿ, ಬಲದಂಡೆ ಹಾಗೂ ರಾಂಪೂರು ಏತ ನೀರಾವರಿ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಿದರೆ ರೈತರಿಗೆ ಬೆಳೆ ಬೆಳೆಯಲು ಹೆಚ್ಚಿನ ಅನುಕೂಲವಾಗುತ್ತದೆ. ಲಿಂಗಸಗೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಸಾರಿ (ಕೆಂಪು) ಭೂಮಿ ಇರುವುದರಿಂದ, ಎಷ್ಟು ನೀರು ಹರಿಸಿದರೂ ಸಾಕಾಗುವುದಿಲ್ಲ. ಜೊತೆಗೆ ಹವಾಮಾನ ವೈಪರಿತ್ಯದಿಂದ ಮುಂಚಿತವಾಗಿ ಬಿತ್ತನೆ ಮಾಡಿದರೂ ಬೆಳೆ ಬೆಳವಣಿಗೆಗೆ ವಿಳಂಬವಾಗುತ್ತಿದೆ.
ಕಾಲುವೆಗಳಿಗೆ ಏಪ್ರಿಲ್ ಕೊನೆಯ ವಾರದವರೆಗೆ ನಿರಂತರವಾಗಿ ನೀರು ಹರಿಸಿದರೆ ಮಾತ್ರ ರೈತರಿಗೆ ಉತ್ತಮ ಫಲ ದೊರೆಯಲಿದೆ. ಇಲ್ಲವಾದಲ್ಲಿ ಬೆಳೆ ನಾಶವಾಗಿ ರೈತರು ಆರ್ಥಿಕ ನಷ್ಟ ಅನುಭವಿಸ ಬೇಕಾಗುತ್ತದೆ. ಆದ್ದರಿಂದ ಬಲದಂಡೆ ಹಾಗೂ ರಾಂಪೂರು ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ ಕೊನೆಯ ವಾರದವರೆಗೆ ನಿರಂತರವಾಗಿ ನೀರು ಹರಿಸಲು ಸರ್ಕಾರ ಕ್ರಮ
ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಿವಪುತ್ರ ಗೌಡ ನಂದಿಹಾಳ, ತಾಲೂಕಾಧ್ಯಕ್ಷ ವೈ.ದುರ್ಗಾಪ್ರಸಾದ್, ಕಾರ್ಯಧ್ಯಕ್ಷ ಆನಂದ ಕುಂಬಾರ, ಹನುಮನಗೌಡ, ಬಸಣ್ಣ ಕೋಠ, ಬಸವರಾಜ್‌, ರಾಮಣ್ಣ, ಮಹಮ್ಮದ್ ಸಾಬ್, ಸೋಮರೆಡ್ಡಿ, ದುರಗಪ್ಪ, ಸದಾನಂದ, ಹನಮಂತ, ಹೊಳೆಪ್ಪ, ಮೌಲಾಸಾಬ್, ಮರಿಯಪ್ಪ, ತಿಪ್ಪಣ್ಣ, ಖಾದರಸಾಬ್‌, ನಾಗಪ್ಪ ಪುಣೆದ, ಹಣಮಂತರಾಯ, ಭೀಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *