ಮಾನ್ವಿ : ಪಟ್ಟಣದ ಈದ್ಗಾ ಶಾದಿ ಮಹಲ್ ಸಭಾಂಗಣದಲ್ಲಿ ರಂಜಾನ್ ಹಬ್ಬದ ಅಂಗವಾಗಿ ತಾಲೂಕಿನ ಮುಸ್ಲಿಂ ಬಾಂಧವರಿಗಾಗಿ ಆಯೋಜಿಸಲಾದ ಇಫ್ತಿಯಾರ್ ಕೂಟದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು 30 ದಿನಗಳ ಕಾಲ ರೋಜಾ ಉಪವಾಸ ಆಚರಿಸಿ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ವಿವಿಧ ಸಮುದಾಯದವರು ಸೇರಿ ಇಫ್ತಿಯಾರ್ ಕೂಟಗಳನ್ನು ಆಯೋಜಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸುವುದು ಶಾಂತಿ ಹಾಗೂ ಸೌಹಾರ್ದತೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.
ಶಾಸಕ ಹಂಪಯ್ಯನಾಯಕ ಮಾತನಾಡಿ, ಹಲವು ವರ್ಷಗಳಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸೇರಿ ರಂಜಾನ್ ಹಬ್ಬದ ಅಂಗವಾಗಿ ಇಫ್ತಿಯಾರ್ ಕೂಟಗಳನ್ನು ಸೌಹಾರ್ದಯುತವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಸಮಾಜದಲ್ಲಿ ಸಹೋದರತ್ವವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮುಸ್ಲಿಂ ಧರ್ಮಗುರು ಸೈಯಾದ್ ಜೀಶನ್ ಹಸನ್ ಖಾದ್ರಿ ಮುಫ್ತಿ ರಂಜಾನ್ ಹಬ್ಬದ ಸಂದೇಶ ನೀಡಿ, ರೋಜಾ ಉಪವಾಸ ಆಚರಿಸುವ ಮುಸ್ಲಿಂ ಧರ್ಮಿಯರಿಗೆ ಹಿಂದೂ ಸಮುದಾಯದವರು ಇಫ್ತಿಯಾರ್ ಕೂಟ ಆಯೋಜಿಸುವುದು ಹಿಂದೂ-ಮುಸ್ಲಿಂ ಏಕತೆ, ಶಾಂತಿ, ಪ್ರೇಮ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಸಾವಿರಾರು ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಭೋಜನವನ್ನು ವಿತರಿಸಲಾಯಿತು.
ರಾಜ್ಯ ಕಾಂಗ್ರೆಸ್ ಯುವ ಮುಖಂಡ ರವಿಭೋಸರಾಜು, ಮಹಮ್ಮದ್ ಶಾಲಂ, ಆರ್.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಪತಂಗೆ ಜಯಂತರಾವ್, ನಯೋಪ್ರ ಅಧ್ಯಕ್ಷ ಅಬ್ದುಲ್ ಗಾಫೂರ್ ಸಾಬ್, ಶೇಖ ಫರೀದ್ ಉಮ್ರಿ, ಶಾಂತಪ್ಪ, ಸೈಯಾದ್ ಅಕ್ಬರ್ ಪಾಷಾ, ಜಮಾತ್ ಇಸ್ಲಾಂ ಹಿಂದ್ ತಾಲೂಕು ಅಧ್ಯಕ್ಷ ಅಬ್ದುಲ್ ರೆಹಮಾನ್ ಸಾಬ್, ಮುಜಾಹಿದಿನ್ ಇಸ್ಲಾಂ, ಮೌಲಾನ ಜೀಶಾನ್, ಶರಣಯ್ಯ ಕೆ.ಗುಡದಿನ್ನಿ, ಬಿ.ಕೆ.ಅಂಬರೇಶಪ್ಪ ಸೇರಿದಂತೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


