ರಾಯಚೂರು ಮಾರ್ಚ್ 16 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ತಯಾರಿಕೆ ಹಿನ್ನಲೆಯಲ್ಲಿ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ದಂದು ಪಾಲಿಕೆಯ ಜೋನಲ್ 01ರ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಜುಬಿನ್ ಮೊಹಾಪಾತ್ರ ಅವರು ಮಾತನಾಡಿ, ರಾಯಚೂರು ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಸಿದ್ಧಪಡಿಸಲು ಸಾರ್ವಜನಿಕರ ನೇರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ ಎಂದರು.
ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ ನಂತರ ಮೊದಲ ಬಜೆಟ್ ಇದಾಗಿದ್ದು,
ಪ್ರತಿಯೊಬ್ಬ ನಾಗರಿಕರು ಮುಕ್ತವಾಗಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರ ಪ್ರದೇಶ ಅಭಿವೃದ್ಧಿ ಹೊಂದಿದೆ. ಬಜೆಟ್ ಅನುಗುಣವಾಗಿ ಆಧ್ಯತೆ ಮೇರೆಗೆ ಕೆಲಸ ಕಾಮಗಾರಿ ಮಾಡಲು ಸಲಹೆ ನೀಡಬೇಕೆಂದರು.
ಹಿಂದಿನ ವರ್ಷದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ಕಸ ಮುಕ್ತ, ರಾಜ ಕಾಲುವೆ ಸ್ವಚ್ಛತ ಮಾಡಿ ಮಳೆಗಾಲದಲ್ಲಿ ತೊಂದರೆ ತಪ್ಪಿಸಲಾಗಿದೆ ಎಂದರು.
ಪಾಲಿಕೆಯು ಆಶ್ರಯ ಯೋಜನೆಯಡಿ 2 ಸಾವಿರ ಮನೆಗಳ ನಿರ್ಮಾಣ ಮಾಡಿದೆ. ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಮುಖಂಡರಾದ ರವಿಂದ್ರ ಜಲ್ದಾರ್ ಅವರು ಮಾತನಾಡಿ, ನಗರಕ್ಕೆ ರಾಂಪೂರ ಮತ್ತು ಕೃಷ್ಣ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ, ಮೋಟಾರುಗಳು ದುರಸ್ತಿಯಾದಲ್ಲಿ ನೀರು ಸರಬರಾಜು ನಿಲ್ಲುತ್ತದೆ. ಹೆಚ್ಚುವರಿ ಮೋಟಾರುಗಳ ವ್ಯವಸ್ಥೆ ಒದಗಿಸಿಕೊಡಬೇಕು. ಹೊಸ ಯೋಜನೆಗಳನ್ನು ರೂಪಿಸಬೇಕು. ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದರು.
ಈ ವೇಳೆ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಮಾಜಿ ಅಧ್ಯಕ್ಷರಾದ ಎನ್.ಮಹಾವೀರ ಅವರು ಮಾತನಾಡಿ, ನಗರ ದೊಡ್ಡ ಪ್ರಮಾದಲ್ಲಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆ ಮಾಡಬೇಕು. ನಾಲ್ಕು ದಿಕ್ಕಿನಲ್ಲಿ ಜೋನ್ ವಲಯ ಮಾಡಿ, ತರಕಾರಿ ಮಾರುಕಟ್ಟೆ, ಹೂ-ಹಣ್ಣುಗಳ ಮಾರುಕಟ್ಟೆ, ಮಾಂಸ ಮಾರುಕಟ್ಟೆ ಮಾಡಬೇಕು ಎಂದರು.
ಈ ವೇಳೆ ದಲಿತ ಸಂಘಟನೆ ಮುಖಂಡ ರಾಜು ಪಟ್ಟಿ ಅವರು ಮಾತನಾಡಿ, ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಂದ ಸರಿಯಾದ ತೆರಿಗೆ ಸಂಗ್ರಹಣೆಯಾಗಬೇಕು. ನಗರದಲ್ಲಿ ಸಾಕಷ್ಟು ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಇದರಿಂದ ನಗರದ ಜನರಿಗೆ ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕೆಂದರು.
ಈ ವೇಳೆ ಬೀದಿಬದಿ ವ್ಯಾಪಾರಿಗಳ ಸಂಘದ ಮುಖ್ಯಸ್ಥ ಯೇಸುಮಿತ್ರ ಅವರು ಮಾತನಾಡಿ, ನಗರದ ಬೀದಿ ಬೀದಿಗಳಲ್ಲಿ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ರಸ್ತೆ ತೆರವು ನೆಪದಲ್ಲಿ ಅಂಗಡಿಗಳನ್ನು ತೆರವು ಮಾಡುವ ಮುನ್ನ ಮಾಹಿತಿ ನೀಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ಪ್ರತೇಕವಾಗಿ ಮಳಿಗೆ ಮಾಡಿ ಒಂದೇ ಕಡೆಗೆ ಇರುವಂತೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದರು.
ಇದೇ ಸಂದರ್ಭಗಳಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಶರಣಪ್ಪ, ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಭರತ್, ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ಪಾಲಿಕೆಯ ವಲಯ 01ರ ಉಪ ಆಯುಕ್ತರಾದ ಮಲ್ಲಿಕಾರ್ಜುನ, ಪಾಲಿಕೆಯ ಸಮನಯ ಅಧಿಕಾರಿ ಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಮುಖಂಡರು ಸಭೆಯಲ್ಲಿ ಇದ್ದರು.


