ತಾಳಿಕೋಟಿ. ಯಾವುದೇ ಹಬ್ಬವಾಗಿರಲಿ ಅದು ಕೇವಲ ಸ್ಥಿತಿವಂತರ ಹಬ್ಬವಾಗಿರುವುದಲ್ಲದೆ ಸಮಾಜದಲ್ಲಿ ಬಡವರು ಹಾಗೂ ಸ್ಥಿತಿವಂತರು ಒಟ್ಟಿಗೆ ಸರಿಸಮಾನವಾಗಿ ಹಬ್ಬವನ್ನು ಆಚರಿಸುವುದು ನಿಜವಾದ ಹಬ್ಬದ ಆಚರಣೆಯಾಗುತ್ತದೆ. ರಂಜಾನ್ ತಿಂಗಳು ನಮಗೆ ತ್ಯಾಗ,ಬಲಿದಾನ ಮತ್ತು ಸಮಾಜಸೇವೆಯ ಸಂದೇಶವನ್ನು ನೀಡುತ್ತೆ ಎಂದು ಮುದ್ದೇಬಿಹಾಳ ನಗರದ ಖ್ಯಾತ ಉದ್ಯಮಿದಾರರು ಹಾಗೂ ಸಮಾಜಸೇವಕರೂ ಆದ ಜನಾಬ ಅಯ್ಯುಬ ಮನಿಯಾರ್ ಅಭಿಪ್ರಾಯ ವ್ಯಕ್ತಪಡಿದರು. ನಗರದ ಮಸ್ಜಿದೆ-ಆಲಾ ಸಭಾಂಗಣದಲ್ಲಿ ಈದ್ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ 100 ಕುಟುಂಬಗಳಿಗೆ ಈದ್ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು ನನ್ನ ಉದ್ದೇಶ ಕೇವಲ ಬಡವರಿಗೆ ಕಿಟ್ ನೀಡುವುದಲ್ಲದೇ ಬದಲಾಗಿ ಅವರೊಂದಿಗೆ ಭೇಟಿಯಾಗಿ ಕುಶಲೋಪರಿಯನ್ನು ವಿಚಾರಿಸಿ ನನ್ನ ಕೈಲಾದಷ್ಟು ಸಹಾಯ ಮಾಡಿದರೆ ಮಾತ್ರ ನನಗೆ ಹಬ್ಬ ಆಚರಿಸಲಿಕ್ಕೆ ಸಂತೋಷವಾಗುತ್ತದೆ ಎಂದು ನುಡಿದ ಅವರು ಬಡವರೊಟ್ಟಿಗೆ ರಂಜಾನ್ ಹಬ್ಬವನ್ನು ಆಚರಿಸುವುದೇ ನನ್ನ ಧ್ಯೇಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಶಿಕ್ಷಕರಾದ ಜನಾಬ ಮೊಹಮ್ಮದ್ ಖಾಸಿಂ ನಮಾಜಕಟ್ಟಿ ಮಾತನಾಡಿ ಅಯ್ಯುಬ ಮನಿಯಾರ ರವರು ಸಮಾಜ ಸೇವೆಯ ಭಾಗವಾಗಿ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕಳೆದ 28 ವರ್ಷಗಳಿಂದ ನಿರಂತರವಾಗಿ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ.
ಪ್ರತಿ ವರ್ಷ ತಾಳಿಕೋಟಿ ಅಲ್ಲದೆ ನಾಲತವಾಡ ಮುದ್ದೇಬಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ರಮಝಾನ್ ತಿಂಗಳ ಸಂದರ್ಭದಲ್ಲಿ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನೊಳಗೊಂಡ ಈದ್ ಕಿಟ್‌ಗಳನ್ನು ವಿತರಿಸುವ ಮೂಲಕ ಅವರು ಮಾನವೀಯ ಸೇವೆಯನ್ನು ಮಾಡುತ್ತಿದ್ದಾರೆ ಅವರ ಈ ನಿಸ್ವಾರ್ಥ ಸೇವೆಗೆ ಜಮಾತೆ ಇಸ್ಲಾಮೀ ಹಿಂದ್ ನಗರ ಘಟಕವು ಸಹಕರಿಸುತ್ತದೆ. 1998 ರಲ್ಲಿ ಪ್ರಥಮವಾಗಿ ಪ್ರಾರಂಭಿಸಿದಾಗ ಅಂದು 14 ಕಿಟ್ ಗಳಿಂದ ಪ್ರಾರಂಭವಾದ ಈ ಸೇವೆ ಇಂದು 800 ಕುಟುಂಬಗಳಿಗೆ ರಂಜಾನ್ ಹಬ್ಬವನ್ನು ಆಚರಿಸಲು ಸಹಾಯ ಮಾಡುತ್ತಿದೆ ಎಂದರು. ತಾಳಿಕೋಟಿ ನಾಲತವಾಡ ಹಾಗೂ ಮುದ್ದೇಬಿಹಾಳ ಪಟ್ಟಣಗಳಲ್ಲಿ ಜಾತಿ ಮತ್ತು ಮತಭೇದವಿಲ್ಲದೆ ನಿಸ್ವಾರ್ಥವಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ, ವಿಧವಾ ಮಾಸಿಕ ಪಿಂಚಣಿ , ಎಲ್ಲಾ ಹಬ್ಬಗಳ ಸಮಯದಲ್ಲಿ ಆಯಾ ಸಮುದಾಯದ ಬಡವರಿಗೆ ಉಡುಗೊರೆಗಳನ್ನು ಕೊಡುವ ಮುಖಾಂತರ ಹಲವಾರು ಸಮಾಜ ಸೇವೆಗಳನ್ನು ಜನಾಬ ಅಯ್ಯುಬ ಮನಿಯಾರ ರವರು ಮಾಡುತ್ತಾ ಬಂದಿದ್ದಾರೆ ಎಂದರು.
ಜನಾಬ್ ಅಯ್ಯುಬ ಮನಿಯಾರ್ ಅವರ ಈ ಮಾನವೀಯ ಸೇವೆಯನ್ನು ಸ್ಥಳೀಯರು ಹಾಗೂ ಸಮಾಜದ ಮುಖಂಡರು ಶ್ಲಾಘಿಸಿದ್ದಾರೆ. ದೀರ್ಘಕಾಲದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಯುವಕರಿಗೆ ಪ್ರೇರಣೆಯಾಗಿದ್ದು, ಇಂತಹ ಸೇವಾ ಕಾರ್ಯಕ್ರಮಗಳು ಸಮಾಜದಲ್ಲಿ ಸಹಕಾರ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಗಣ್ಯರಾದ ಇಂಜಿನಿಯರ ಮುರ್ತುಜಾ ಮ್ಹೇತ್ರಿ
ಜನಾಬ ಇಬ್ರಾಹಿಮ್ ಸಾಬ ಆರ್ಬೋಳ, ಹಬೀಬಸಾಬ ಮಾನ್ವಿ,
ಖುತ್ಬುದ್ದಿನ ಮೋಮಿನ್, ಮಹಿಬೂಬ ಯಕೀನ,
ಪತ್ರಕರ್ತರಾದ ರಾಜೇಶ್ ಇನಾಮದಾರ,
ಜನಾಬ ಎಲ್.ಎಚ್. ಮಮದಾಪೂರ,
ಜನಾಬ ಆಫ್ತಾಬ ಮನಿಯಾರ, ಬಾಬಾ ಯಕೀನ ಹಾಗೂ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಕ್ಷಕರಾದ ಇರ್ಫಾನ್ ಕಾಜಿ ಕುರ್ ಆನ್ ಪಠಿಸಿದರು
ಇಲಿಯಾಸ ಚೌದ್ರಿ ನಿರೂಪಿಸಿದರು
ಮುಜಾಹಿದ್ ನಮಾಜಕಟ್ಟಿ ವಂದಿಸಿದರು.


