ಬೇಸಿಗೆ ಸುಡು ಬಿಸಿಲಿನ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನರು ದಾಹ ತಣಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಎಳನೀರು ದರ 60-70 ರೂ. ಏರಿಕೆಯಾಗಿ ಗ್ರಾಹಕರ ಜೇಬು ಸುಡುವಂತಾಗಿದೆ.ದೇಹಕ್ಕೆ ತಂಪು ಹಾಗೂ ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ನೈಸರ್ಗಿಕವಾದ ಎಳನೀರು ಬಹುಜನರ ಆಯ್ಕೆಯಾಗಿದೆ. ಆದರೆ, ಬೇಸಿಗೆ ಹವಾಮಾನ ವೈಪರೀತ್ಯ, ತೆಂಗು ಬೆಳೆಗೆ ಬಾಧಿಸುತ್ತಿರುವ ಕೀಟ ರೋಗದ ಪರಿಣಾಮವಾಗಿ ಇಳುವರಿ ಕುಂಠಿತವಾಗಿ ರಾಜಧಾನಿಗೆ ಎಳನೀರು ಪೂರೈಕೆ ಪ್ರಮಾಣ ಕಡಿಮೆಯಾಗಿದೆ.
ಹೀಗಾಗಿ 30, 40 ರಿಂದ 50 ರೂ. ದರದಲ್ಲಿ ಮಾರಾಟವಾಗುತ್ತಿದ್ದ ಎಳನೀರು ದರ ಈಗ 70 ರೂ.ಗೆ ಏರಿಕೆಯಾಗಿದೆ. ಸಾಮಾನ್ಯವಾಗಿ ಎಲ್ಲಾ ಋತುಗಳಲ್ಲಿಯೂ ಎಳನೀರಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಮಕ್ಕಳು, ವೃದ್ಧರು, ರೋಗಿಗಳು, ಐಟಿ ಮಂದಿ ಸೇರಿದಂತೆ ಬಹುತೇಕರು ರಾಸಾಯನಿಕ ತಂಪು ಪಾನೀಯಗಳ ಬದಲಾಗಿ ಸ್ವಾಭಾವಿಕವಾಗಿ ಎಳನೀರಿನ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು ಚಿಲ್ಲರೆ ಮಾರಾಟದಲ್ಲಿ 65 ರಿಂದ 70 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ನಗರದ ಎಂ.ಜಿ. ರಸ್ತೆ, ಮೆಜೆಸ್ಟಿಕ್, ವಿಧಾನಸೌಧ, ಕಾರ್ಪೋರೇಷನ್, ಮಲ್ಲೇಶ್ವರ, ಜಯನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಎಳನೀರು ದುಬಾರಿ ದರದಲ್ಲಿ ಮಾರಾಟವಾಗುತ್ತಿದೆ. ಏಪ್ರಿಲ್, ಮೇನಲ್ಲಿ ಏಳನೀರು ಪೂರೈಕೆ ಪ್ರಮಾಣ ಕಡಿಮೆಯಾಗಿ ದರವು ಇನ್ನಷ್ಟು ಹೆಚ್ಚಾಗಬಹುದು. ಬೆಂಗಳೂರಿಗೆ ಹೆಚ್ಚಾಗಿ ಮಂಡ್ಯ, ತುಮಕೂರು, ರಾಮನಗರ, ಚಾಮರಾಜನಗರ, ಹಾಸನ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಪೂರೈಕೆಯಾಗುತ್ತದೆ. ಕೆಲವು ಭಾಗದಲ್ಲಿ ಮಳೆ ಕೊರತೆಯಿಂದಾಗಿ ನಿರೀಕ್ಷಿತ ಫಸಲು ಬಂದಿಲ್ಲ. ಹಾಗಾಗಿ ಮೊದಲಿನಷ್ಟು ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಎಳನೀರು ಬೆಂಗಳೂರಿಗೆ ಪೂರೈಕೆಯಾಗುತ್ತಿಲ್ಲ.
ನಾವೂ ಕೂಡ ಸಗಟು ವ್ಯಾಪಾರಿಗಳಿಂದ ಖರೀದಿಸಿ ತಂದು ಮಾರಾಟ ಮಾಡುತ್ತೇವೆ. ಬೇಸಿಗೆ ಕಾರಣಕ್ಕೆ ಸ್ವಾಭಾವಿಕವಾಗಿ ದರ ಹೆಚ್ಚಾಗಿರುತ್ತದೆ ಎಂದು ಎಂ.ಜಿ. ರಸ್ತೆಯ ಎಳನೀರಿನ ವ್ಯಾಪಾರಿ ಚಿದಾನಂದ್ ಹೇಳುತ್ತಾರೆ. ಗಾತ್ರಕ್ಕೆ ತಕ್ಕಂತೆ ಎಳನೀರು ದರ ನಿಗದಿಪಡಿಸಿದ್ದೇವೆ. ಸಣ್ಣ ಗಾತ್ರಕ್ಕೆ 35 ರಿಂದ 40 ರೂ,. ಮಧ್ಯಮ ಗಾತ್ರ 50-60 ರೂ. ಹಾಗೂ ದಪ್ಪ ಗಾತ್ರದ ಎಳನೀರಿಗೆ 70 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಕಲ್ಲಂಗಡಿ ವ್ಯಾಪಾರ ಭರಾಟೆ ಜೋರು!
ಬೇಸಿಗೆ ಕಾರಣ ಗ್ರಾಹಕರು ಕೈಗೆಟಕುವ ದರದಲ್ಲಿ ಸಿಗುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಈ ಋತುಮಾನದಲ್ಲಿ ಹೆಚ್ಚಾಗಿ ಸಿಗುವ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ ಸೇರಿ ನಗರದ ಪ್ರಮುಖ ಕಡೆಗಳಲ್ಲಿ ರಸ್ತೆ ಮಾರ್ಗಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಲ್ಲಂಗಡಿ ಪ್ರತಿ ಕೆ.ಜಿ.ಗೆ 25ರಿಂದ 30 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

