ಕನಕಾಚಲಪತಿ ಜಾತ್ರೆಯೆಂದರೆ ಈ ಭಾಗದಲ್ಲಿ ಪ್ರಸಿದ್ಧ. 20 ದಿನಗಳ ಜಾತ್ರೆಯಲ್ಲಿ ರಾಜಬೀದಿಯಲ್ಲಿ ಬಳೆ, ಬಲೂನ್, ರಿಂಗ್, ಮಕ್ಕಳ ಆಟಿಕೆ ಸಾಮಗ್ರಿ, ಗೃಹಯೋಪಯೋಗಿ ವಸ್ತುಗಳ ಮಾರಾಟ, ಮಿಠಾಯಿ ಅಂಗಡಿಗಳ ವ್ಯಾಪಾರ ಜೋರಾಗಿದೆ.ಈ ಜಾತ್ರೆಯಲ್ಲಿ ಮಿಠಾಯಿ ಅಂಗಡಿಯೊಂದು ವ್ಯಾಪಾರ ವಹಿವಾಟಿನೊಂದಿಗೆ ಸದ್ದಿಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ.
ಮಿಠಾಯಿ ಅಂಗಡಿಯ ಮಾಲೀಕ ಕಾಶೀಂಸಾಬ ಮಂಗಳೂರು ಅವರು, ಎರಡು ದಶಕಗಳಿಂದ ತಮ್ಮ ಅಂಗಡಿಯಲ್ಲಿ ಸಿಹಿ ಖಾದ್ಯದಿಂದ ಸಿದ್ಧಪಡಿಸಿದ ಸಂದೇಶ ಅಥವಾ ಫ್ಲೆಕ್ಸ್ ಹಾಕಿ, ಆರೋಗ್ಯಕರ ಸಮಾಜಕ್ಕೆ ಶ್ರಮಿಸುತ್ತಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಚಾಲ್ತಿಯಲ್ಲಿರುವ ವಸ್ತು ವಿಷಯಗಳು ಸಂದೇಶಗಳಲ್ಲಿ ಅಡಗಿರುತ್ತದೆ. ರಾಜ್ಯ ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿರುವ ಎನ್‌ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದು ಗೊಳಿಸಿ, ಒಟಿಎಸ್(ಹಳೆಯ ಪಿಂಚಣಿ ಯೊಜನೆ) ಜಾರಿಗೆ ತನ್ನಿ, ಪಿಂಚಣಿ ನಮ್ಮ ಹಕ್ಕು ಎಂದು ಸಂದೇಶ ಹಾಕಿ, ಹೋರಾಟವನ್ನು ಬೆಂಬಲಿಸಿದ್ದರು. ಕೇಂದ್ರ ಸರ್ಕಾರದ ‘ಕ್ಯಾಶಲೆಸ್ ವ್ಯವಹಾರ, ದೇಶದ ಅಭಿವೃದ್ಧಿಗೆ ಸಹಕಾರ’ ಎಂದು ಘೋಷಣೆ ಬರೆಯಿಸಿ, ಸರ್ಕಾರದ ಯೋಜನೆಗಳಿಗೆ ಸಾಥ್ ನೀಡಿದರು.
ಅವರು, ಕೊಪ್ಪಳ ಗವಿಮಠ, ಛತ್ತರ, ಪುರ, ನವಲಿ, ವಡಕಿ, ತಾವರಗೇರಾದ ಉರುಸು..ಹೀಗೆ ಸುತ್ತಲಿನ ಊರುಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮಿಠಾಯಿ ಅಂಗಡಿ ತೆಗೆದು ಬೆಲ್ಲದ ಜಿಲೆಬಿ, ಕರದಂಟು, ಮೈಸೂರು ಪಾಕ್, ಬೆಂಡು-ಬತ್ತಾಸು, ಲಾಡು ಜತೆಗೆ ಕರೀದ ಶೇಂಗಾ ಬೀಜ, ಪುಟಾಣಿ, ಪುಗ್ಗಿ, ಕಾರ್, ಖರೀದ ಅವಲಕ್ಕಿ.. ಹೀಗೆ ವಿವಿಧ ಖಾದ್ಯ ಮಾರಾಟ ಮಾಡುತ್ತಾರೆ.
ಕಾನ್ವೆಂಟ್ ಶಾಲೆಗಳ ಹಾವಳಿ ಹಾಗೂ ಇಂಗ್ಲಿಷ್ ಶಾಲೆಗಳ ಬಗ್ಗೆ ಪಾಲಕರ ಆಕರ್ಷಣೆಗೆ ಬೇಸತ್ತು ‘ಕನ್ನಡದ ಭಾಷೆ ಉಸಿರಾಗಲಿ’ ಎಂದು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’, ರೈತಪರ ಧ್ವನಿ ಎತ್ತಿ, ‘ರೈತ ಬಿತ್ತದಿದ್ದರೆ ದೇಶ ಬಿಕ್ಕುವುದು’ ಎಂದು ಬರೆದು ಗಮನ ಸೆಳೆದರು. ಜಿಲ್ಲೆಯ ತಾಣಗಳಾದ ಹುಲಿಗೆಮ್ಮ ದೇವಿ ದೇವಸ್ಥಾನ, ಅಂಜನಾದ್ರಿ, ಆನೆಗೊಂದಿ ತಾಣಗಳನ್ನು ‘ಕೊಪ್ಪಳ ಜಿಲ್ಲೆಯ ಐತಿಹಾಸಿಕ ತಾಣಗಳು’, ಕ್ರಿಕೆಟ್ ಪ್ರೇಮಿಗಳಿಗಾಗಿ ‘ಈ ಸಲ ಕಪ್ ನಮ್ದೆ’, ‘ತುಂಗಾಭದ್ರಾ ಅಭಿಯಾನದಲ್ಲಿ ‘ಮಲೀನ ತೊಲಗಿಸಿ, ತುಂಗಾಭದ್ರಾ ಉಳಿಸಿ’ ಎಂದು ನೀರಿನ ಕುರಿತು ಜಾಗೃತಿ ಮೂಡಿಸಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿಗಳಾದ ದ್ಯಾಮೇಶ ಹೂಗಾರ, ಬಾಳು ಬೆಳಗುಂದಿ, ಹನುಮಂತು ಅವರಿಗೂ ಶುಭ ಹಾರೈಸಿದ್ದಾರೆ. 2026ರ ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ‘ಮಲೀನ ಮುಕ್ತ ಕೊಪ್ಪಳ ಬೇಕು, ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳು ಬೇಡ’, ‘ಆರೋಗ್ಯ ಮೊದಲು, ಕಾರ್ಖಾನೆ ನಂತರ, ‘ಕೊಪ್ಪಳ ಜಿಲ್ಲಾ ರಕ್ಷಣೆ, ನಮ್ಮೆಲ್ಲರ ಹೊಣೆ’ ಎಂದು ಬರೆಯಿಸಿ ಕಾರ್ಖಾನೆ ವಿರೋಧಿ ಹೋರಾಟವನ್ನು ಬೆಂಬಲಿಸಿದ್ದರು.
‘ನುಡಿಯಿಂದ ಧರ್ಮವಲ್ಲ, ನಡೆಯಿಂದ ಧರ್ಮ’, ‘ಗಗನಕ್ಕೇರಿದ ಬಂಗಾರ ಯಾಕೆ? ಮನಕ್ಕೆ ಶಾಂತಿ ನೀಡುವ ಕನಕರಾಯ ಇರೋವರೆಗೆ’ ಎಂದು ಬರೆಸಿದರು. ಕಳೆದ ವರ್ಷ ಕ್ಷಯ ರೋಗದ ಕುರಿತು ಅರಿವು ಮೂಡಿಸಿದ್ದ ಕಾಶೀಂಸಾಬ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗಿದೆ. ಅಲ್ಲದೆ ಕನ್ನಡ ಪರ ಸಂಘಟನೆಗಳು ಗೌರವಿಸಿವೆ.

