ಸಿಂಧನೂರು (ಮಾ. 13):
ನಗರದ ಪ್ರತಿಷ್ಠಿತ ಸನ್ ರೈಸ್ ಡಿ-ಫಾರ್ಮಸಿ , ನರ್ಸಿಂಗ್, ಪಾರಾ ಮೆಡಿಕಲ್ ಕಾಲೇಜಿನ ವತಿಯಿಂದ ‘ರಾಷ್ಟ್ರೀಯ ಚರ್ಮರೋಗ ತಜ್ಞರ ದಿನ’ದ ಅಂಗವಾಗಿ ಸಿಂಧನೂರಿನ ಹೆಸರಾಂತ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ, ಅವರ ನಿರಂತರ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮಾನವನ ದೇಹದ ರಕ್ಷಣಾ ಕವಚವಾಗಿರುವ ಚರ್ಮದ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸ. ಇಂದಿನ ಬದಲಾದ ಜೀವನಶೈಲಿ ಹಾಗೂ ಪರಿಸರ ಮಾಲಿನ್ಯದ ನಡುವೆ ಚರ್ಮದ ಸೋಂಕುಗಳು, ಅಲರ್ಜಿ ಮತ್ತು ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ವೈದ್ಯರ ಪಾತ್ರ ಅನನ್ಯವಾದುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಚರ್ಮದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಲ್ಲಾ ಸ್ಕಿನ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ. ನಲ್ಲಾ ರಾಕೇಶ್, ಆರೋಗ್ಯಾ ಆಸ್ಪತ್ರೆಯ ವೈದ್ಯರಾದ ಡಾ. ಸಿರಿಷಾ ಹಾಗೂ ಸೂರ್ಯ ಸ್ಕಿನ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ. ಸಿಂಧೂರಿ ಇವರುಗಳನ್ನು ಸಂಸ್ಥೆಯ ವತಿಯಿಂದ ಅವರ ಆಸ್ಪತ್ರೆಗಳಿಗೆ ತಲುಪಿ ಸನ್ಮಾನಿಸಿ ಗುರುತಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ. ಅತ್ತಾರ್ ಅವರು ಮಾತನಾಡಿ, “ವೈದ್ಯರು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಜವಾದ ರಕ್ಷಕರು. ಚರ್ಮದ ಸಮಸ್ಯೆಗಳನ್ನು ಕೇವಲ ಸೌಂದರ್ಯದ ದೃಷ್ಟಿಯಿಂದ ನೋಡದೆ, ಒಟ್ಟಾರೆ ಆರೋಗ್ಯದ ಸೂಚಕವಾಗಿ ಪರಿಗಣಿಸಬೇಕು. ನಮ್ಮ ನಗರದ ತಜ್ಞ ವೈದ್ಯರು ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಜನಸಾಮಾನ್ಯರಿಗೆ ನೆರವಾಗುತ್ತಿರುವುದು ಹೆಮ್ಮೆಯ ವಿಷಯ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಭಾಗವಾಗಿ ಸನ್ ರೈಸ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಚರ್ಮದ ಆರೈಕೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಸ್ವಯಂ ಚಿಕಿತ್ಸೆಗಿಂತ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂಬ ಸಂದೇಶವನ್ನು ಸಾರಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಲಾಜರ್ ಸಿರಿಲ್ ಜಿ, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವೈದ್ಯರಿಗೆ ಶುಭಾಶಯಗಳನ್ನು ಕೋರಿದರು.

Leave a Reply

Your email address will not be published. Required fields are marked *