ರಾಯಚೂರು ಮಾರ್ಚ್ 11 (ಕರ್ನಾಟಕ ವಾರ್ತೆ): ಮಹಿಳೆಯರು ಎದುರಿಸುತ್ತಿರುವ ಗಂಭೀರ ಅನಾರೋಗ್ಯ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ. ಮಹಿಳೆಯರು ಎಚ್‌ಪಿವಿ ಲಸಿಕೆ ಪಡೆಯುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಹೇಳಿದರು.

ಮಾರ್ಚ್ 11 ಬುಧವಾರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ವಿತರಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

14 ವರ್ಷದ ಶಾಲಾ ಮಕ್ಕಳಿಗೆ ಸರ್ಕಾರದಿಂದ ಲಸಿಕೆ ನೀಡುವ ಈ ಅಭಿಯಾನವು 2 ಹಂತಗಳಲ್ಲಿ ನಡೆಯಲಿದೆ. ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯುವ ಮೂಲಕ ಗರ್ಭಕಂಠದ ಕ್ಯಾನ್ಸರ್ ದೂರ ಮಾಡಬೇಕು. ಲಸಿಕೆ ತೆಗೆದುಕೊಳ್ಳಲು ಯಾವುದೇ ಭಯ, ಆತಂಕ ಪಡಬಾರದು. ಜಿಲ್ಲೆಗೆ ನಿಗದಿಯಾದ ಗುರಿ ಸಾಧಿಸಲು ಸಹಕರಿಸಬೇಕು ಎಂದರು.

ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಈ ಲಸಿಕಾ ಅಭಿಯಾನವನ್ನು ರಾಯಚೂರು ಜಿಲ್ಲೆಯಲ್ಲಿಯೂ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 14 ವರ್ಷದ ಸುಮಾರು 22 ಸಾವಿರ ಹುಡುಗಿಯರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆಯನ್ನು ಹಾಕಲಾಗುತ್ತದೆ. ಈ ಅಭಿಯಾನವು ಮೂರು ತಿಂಗಳು ನಡೆಯಲಿದ್ದು, 14 ವರ್ಷದ ಎಲ್ಲ ಬಾಲಕಿಯರು ಲಸಿಕೆ ಪಡೆದುಕೊಳ್ಳಬೇಕು. ಮಹಿಳೆಯರಲ್ಲಿ ಹೆಚ್ಚಾಗಿ ಗರ್ಭಕಂಠ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಈ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ ಸಹಕಾರಿ ಎಂದರು.

ಪೋಸ್ಟರ್ ಬಿಡುಗಡೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆಯಿಂದ ಎಚ್‌ಪಿವಿ ಲಸಿಕೆ ಅಭಿಯಾನ-2026ರ ನಮ್ಮ ಹೆಣ್ಣುಮಕ್ಕಳ ಆರೋಗ್ಯ-ನಾಡಿನ ಸುಭದ್ರ ಭವಿಷ್ಯ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದೇ ಹೆಜ್ಜೆ ಇಡಿ! ಎಂಬ ಪೋಸ್ಟರ್ ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಸೇರಿದಂತೆ ವಿವಿಧ ಗಣ್ಯರು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಅಮೃತ ಹುಕೇರಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಜ್ವಲ್, ಮಕ್ಕಳ ತಜ್ಞರಾದ ಡಾ.ಇಮ್ರಾನ್, ಡಾ.ಅನುಷಾ, ಐಎಮ್‌ಎ ನ ಡಾ.ಶ್ರೀಲತಾ ಪಾಟೀಲ್, ಡಾ.ತೃಪ್ತಿ, ವೈದ್ಯರಾದ ಡಾ.ಗುಂಡಮ್ಮ, ಡಾ.ಸುನೀಲ್, ಡಾ.ಶ್ವೇತಾಂಬರಿ, ಡಾ.ಅಷ್ಪಾಕ್ ಹುಸೇನ್, ಡಿಹೆಚ್‌ಇಓ ಈಶ್ವರ ದಾಸಪ್ಪನವರ, ಶುಶ್ರೂಷಾಧಿಕಾರಿ ಸಲೋಮಿ, ಸಿಆರ್‌ಪಿ ಮಾರೆಪ್ಪ ಬಲ್ಲಟಗಿ, ಬಿಹೆಚ್‌ಇಓ ನಾಗರಾಜ್, ಸರೋಜಾ ಕೆ, ಮುಖ್ಯೋಪಾಧ್ಯಾಯರಾದ ಈರಮ್ಮ, ಕವಿತಾ, ಹಿರಿಯ ಆ ಸುರಕ್ಷಣಾಧಿಕಾರಿ ಸುರೇಶ್, ಈರಮ್ಮ, ವಿಜಯಾ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಇದ್ದರು.

Leave a Reply

Your email address will not be published. Required fields are marked *