ಮಸ್ಕಿ : ಸರ್ಕಾರವು “ಎಲ್ಲರಿಗೂ ಶಿಕ್ಷಣ” ಎಂಬ ಘೋಷಣೆಯಡಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಬಡ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುತ್ತಿರುವ ಗಂಭೀರ ಘಟನೆ ತೋರಣದಿನ್ನಿಯ ಜನವಸತಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮಸ್ಕಿ ತಾಲೂಕಿನ ತೋರಣದಿನ್ನಿ ಸರ್ಕಾರಿ ಶಾಲೆಯು ಮೂಲಸೌಕರ್ಯ ಅಥವಾ ಇತರ ಕಾರಣಗಳಿಂದಾಗಿ ಹಲವಾರು ವರ್ಷಗಳಿಂದ ಸುಮಾರು 1.5 ಕಿಲೋಮೀಟರ್ ದೂರಕ್ಕೆ ಸ್ಥಳಾಂತರಗೊಂಡಿದೆ. ಹಾಗೂ ತಾಯಮ್ಮ ಕ್ಯಾಂಪ್ ನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸಿಬ್ಬಂದಿ ಕೊರತೆಯಿಂದ ಮುಚ್ಚಲಾಗಿದೆ.ಸಣ್ಣ ಮಕ್ಕಳು ಅಷ್ಟು ದೂರ ನಡೆದು ಹೋಗುವುದು ಪೋಷಕರಿಗೆ ಆತಂಕ ತಂದಿದೆ. ಇತ್ತ ಹತ್ತಿರದಲ್ಲೇ ಇರುವ ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಅಡಿಯಲ್ಲಿ ಸೀಟು ಪಡೆಯಲು ಹೋದರೆ, “ದಾಖಲೆಗಳಲ್ಲಿ ಸರ್ಕಾರಿ ಶಾಲೆ ನಿಮಗೆ ಉಚಿತ ಸೀಟು ಸಿಗುವುದಿಲ್ಲ” ಎಂಬ ಉತ್ತರ ಬರುತ್ತಿದೆ.
“ನಾವು ದಿನವಿಡೀ ಕೂಲಿ ಮಾಡುವವರು. ಮಕ್ಕಳಿಗೆ 1.5 ಕಿ.ಮೀ(ತೋರಣದಿನ್ನಿ ಗ್ರಾಮದಿಂದ) ಹಾಗೂ 2.5 ಕಿ. ಮೀ. (ತಾಯಮ್ಮ ಕ್ಯಾಂಪ್ )ದೂರದ ಶಾಲೆಗೆ ಬಿಟ್ಟು ಬರಲು ನಮಗೆ ಸಮಯವಿಲ್ಲ, ಮಕ್ಕಳನ್ನು ಒಬ್ಬರೇ ಕಳುಹಿಸಲು ರಸ್ತೆಯ ಸುರಕ್ಷತೆಯ ಭಯವಿದೆ. ಹತ್ತಿರದ ಖಾಸಗಿ ಶಾಲೆಗೆ ಸೇರಿಸೋಣ ಎಂದರೆ ಶುಲ್ಕ ಕಟ್ಟುವ ಆರ್ಥಿಕ ಶಕ್ತಿ ನಮಗಿಲ್ಲ.ಆರ್ ಟಿ ಇ ಸೌಲಭ್ಯವೂ ನಮಗೆ ತಾಂತ್ರಿಕ ಕಾರಣಗಳಿಂದ ಕೈತಪ್ಪುತ್ತಿದೆ” ಎಂದು ಸ್ಥಳೀಯ ಹನುಮೇಶ ನಾಯಕ ಮಾಜಿ ಗ್ರಾಪಂ ಉಪಾಧ್ಯಕ್ಷ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *