ಜಾಲಹಳ್ಳಿ: ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಅವರ ಸೇವೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರು ಭಕ್ತಿಭಾವದಿಂದ ಮುಂದಾಗಿರುವುದು ಗಮನ ಸೆಳೆಯುತ್ತಿದೆ. ಪಾದಯಾತ್ರಿಕರಿಗಾಗಿ ಅನ್ನಸಂತರ್ಪಣೆ, ವಿಶ್ರಾಂತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಯುವಕರು ಸೇವಾ ಮನೋಭಾವವನ್ನು ಮೆರೆದಿದ್ದಾರೆ.
ಜಾಲಹಳ್ಳಿ ಗ್ರಾಮದಲ್ಲಿ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರು ಕಳೆದ 13 ವರ್ಷಗಳಿಂದ ನಿರಂತರವಾಗಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಭಕ್ತರಿಗಾಗಿ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 4 ಗಂಟೆಯಿಂದಲೇ ಪಾದಯಾತ್ರಿಕರು ತಮ್ಮ ಪ್ರಯಾಣ ಆರಂಭಿಸಿ ಜಾಲಹಳ್ಳಿ ಹಾಗೂ ಸಮೀಪದ ಕರಡಿಗುಡ್ಡ ಸೀಮಾಂತರದ ದೇವಸ್ಥಾನಕ್ಕೆ ತಲುಪುತ್ತಾರೆ. ಇಲ್ಲಿ ಯಾತ್ರಿಕರಿಗಾಗಿ ಅನ್ನಸಂತರ್ಪಣೆಯ ಜೊತೆಗೆ ವಿಶ್ರಾಂತಿ ವ್ಯವಸ್ಥೆಯನ್ನೂ ಮಾಡಲಾಗಿದೆ.
ಯಾತ್ರಿಕರನ್ನು ಟೀ ಹಾಗೂ ಬಿಸ್ಕೆಟ್ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ. ಬೆಳಗಿನ ಉಪಹಾರವಾಗಿ ಇಡ್ಲಿ, ಸಾಂಬಾರ್, ದೋಸೆ, ವಡೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಜೊತೆಗೆ ದಿನವಿಡೀ ಅನ್ನ, ಸಾಂಬಾರ್, ಹಣ್ಣು ಪ್ರಸಾದ, ತಂಪು ಪಾನೀಯ ಹಾಗೂ ಮಜ್ಜಿಗೆ ಮುಂತಾದವುಗಳನ್ನು ಭಕ್ತರಿಗೆ ಪ್ರೀತಿಯಿಂದ ವಿತರಿಸಲಾಗುತ್ತಿದೆ.
ದೂರದ ಪ್ರಯಾಣದಿಂದ ಆಯಾಸಗೊಂಡು ಬರುವ ಪಾದಯಾತ್ರಿಕರಿಗೆ ರಾತ್ರಿ ವಿಶ್ರಾಂತಿಗಾಗಿ ಚಾಪೆ ಮತ್ತು ಜಮಕಾನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಸ್ನಾನಕ್ಕೆ ಬಿಸಿ ನೀರು, ಕಾಲು ಮಸಾಜ್ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಒದಗಿಸಿರುವುದು ವಿಶೇಷವಾಗಿದೆ.
ಸುಮಾರು 15,000ಕ್ಕೂ ಹೆಚ್ಚು ಮಲ್ಲಿಕಾರ್ಜುನ ಸ್ವಾಮಿ ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸೇವೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ಎಲ್ಲರೂ ಭಾಗವಹಿಸಿ ಸೇವೆ ಸಲ್ಲಿಸಿರುವುದು ವಿಶೇಷವಾಗಿದೆ.
ಈ ರೀತಿಯ ನಿಸ್ವಾರ್ಥ ಸೇವಾ ಕಾರ್ಯಗಳ ಮೂಲಕ ಜಾಲಹಳ್ಳಿಯ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರು ಭಕ್ತಿ, ಆತಿಥ್ಯ ಮತ್ತು ಮಾನವೀಯತೆಯ ಮಾದರಿಯಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


