ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಯ ಅಕ್ಷರ ಆವಿಷ್ಕಾರ ಯೋಜನೆ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಪ್ರಾರಂಭವಾದ ಎಲ್.ಕೆ.ಜಿ, ಯುಕೆಜಿ (ಇಸಿಸಿಇ)ಮತ್ತು ದ್ವಿಭಾಷಾ ( ಬೈಲಿಂಗ್ವಲ್) ತರಗತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಹಾಗೂ ಆಯಾಗಳಿಗೆ ಜೂನ್ ತಿಂಗಳಿನಿಂದ ಇಂದಿನವರೆಗೂ ಸಂದಾಯವಾಗದೇ ಇರುವ ಗೌರವಧನ ಕೂಡಲೆ ಬಿಡುಗಡೆ ಮಾಡುವಂತೆ ಅತಿಥಿ ಶಿಕ್ಷಕರ ಪರವಾಗಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್( ಎಐಡಿವೈಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಅವರಿಗೆ ಬರೆದ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು. 9 ತಿಂಗಳಿನಿಂದ ಅತಿಥಿ ಶಿಕ್ಷಕರು ಗೌರವಧನ ಬಿಡುಗಡೆ ಆಗದಿರುವುದರಿಂದ ಬಹಳಷ್ಟು ತೊಂದರೆಗೆ ಸಿಲುಕಿದ್ದಾರೆ. ಹಲವರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸಾಲ ಮಾಡಿಕೊಂಡು ಬದುಕುತ್ತಿದ್ದಾರೆ. ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆರ್ಥಿಕ ವರ್ಷ ಮುಗಿಯಲು ಬಂದರು ಸಹ ಗೌರವಧನ ದೊರೆಯದೆ ಇರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಎರಡು ತಿಂಗಳಿನಿಂದ ಗೌರವಧನ ಬಿಡುಗಡೆ ಮಾಡುವಂತೆ ಹಲವು ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಆಯಾಗಳು ಮುಖ್ಯೋಪಾಧ್ಯಾಯರು, ಸಿಆರ್‌ಪಿ, ಬಿಇಒ, ಡಿಡಿಪಿಐ, ಜಿಲ್ಲಾಧಿಕಾರಿಗಳ ಮೂಲಕ ಕೆಕೆಆರ್‌ಡಿಬಿ ಅಧ್ಯಕ್ಷರಿಗೂ ಮನವಿ ಪತ್ರ ಸಲ್ಲಿಸಲಾಗಿದೆ.
ಆದರೂ ಸಹ ಇದುವರೆಗೆ ಸಮಸ್ಯೆಗೆ ಸ್ಪಷ್ಟ ಪರಿಹಾರ ದೊರಕಿಲ್ಲ. ಆದ್ದರಿಂದ ತಾವು ಈ ಕೂಡಲೇ ಅತಿಥಿ ಶಿಕ್ಷಕರ ಗೌರವಧನ ಸಂದಾಯ ಮಾಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು 2025–26ನೇ ಸಾಲಿನ ಆಯವ್ಯಯ ಭಾಷಣದಲ್ಲಿ (ಕಂಡಿಕೆ 111(1)) ಅತಿಥಿ ಶಿಕ್ಷಕರ ಗೌರವಧನವನ್ನು ₹2000 ಹೆಚ್ಚಿಸುವುದಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು, ಅದು ಕಲ್ಯಾಣ ಕರ್ನಾಟಕ ಭಾಗದ ಅತಿಥಿ ಶಿಕ್ಷಕರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಾ ಅತಿಥಿ ಶಿಕ್ಷಕರಿಗೆ 12,000 ಗೌರವಧನ ನೀಡಬೇಕೆಂದು ಆದೇಶವಿದ್ದರೂ ಸಹ 10,000 ಗೌರವಧನ ನೀಡುವುದು ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರ ನಡುವೆ ತಾರತಮ್ಯ ತೋರಿಸಿದಂತಾಗುತ್ತದೆ. ಮಕ್ಕಳಿಗೆ ಪಾಠ ಬೋಧನೆ ಮಾಡುವಲ್ಲಿ ತೊಡಗಿರಬೇಕಾದ ಅತಿಥಿ ಶಿಕ್ಷಕರು ತಿಂಗಳಲ್ಲಿ ಒಂದೆರಡು ದಿನ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಗೆ ಒಳಗಾಗಿದ್ದಾರೆ. “ಕೆಲಸ ಮಾಡಿದರೂ ಗೌರವಧನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ” ಈ ಹಿನ್ನೆಲೆಯಲ್ಲಿ ಅಗತ್ಯ ಅನುದಾನ ಒದಗಿಸಿ
ಅತಿಥಿ ಶಿಕ್ಷಕರ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೆಕೆಆರ್‌ಡಿಬಿ ಕಾರ್ಯದರ್ಶಿಗಳು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕರ ಜೊತೆಗೆ ಮಾತನಾಡಿ ಎರಡು ದಿನಗಳಲ್ಲಿ ಗೌರವದಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾಧ್ಯಕ್ಷರಾದ
ಚನ್ನಬಸವ ಜಾನೇಕಲ್,
ಜಿಲ್ಲಾ ಕಾರ್ಯದರ್ಶಿ
ವಿನೋದ್ ಕುಮಾರ್, ಶಿವಪ್ಪ ಅಸ್ಕಿಹಾಳ್ ನೇತೃತ್ವ ವಹಿಸಿದ್ದರು ಮತ್ತು ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

