ಅಪ್ಪಟ ನೈಸರ್ಗಿಕ ಕೃಷಿ ಪದ್ಧತಿ ಅವಲಂಬಿಸಿ ವಿವಿಧ ಬೆಳೆಗಳನ್ನು ಬೆಳೆದು, ಉತ್ತಮ ಆದಾಯ ಪಡೆಯುತ್ತ, ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ ಪದವೀಧರ ರೈತ ಹನುಮಂತಪ್ಪ ವಾಲಿಕಾರ್.ರೈತ ಹನುಮಂತಪ್ಪ ತಾಲ್ಲೂಕಿನ ತಳಕಲ್ ಗ್ರಾಮದವರು. ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿದು ಯಶಸ್ವಿಯತ್ತ ಸಾಗುತ್ತಿದ್ದಾರೆ.ತಮ್ಮ 3 ಎಕರೆ ಜಮೀನಿನಲ್ಲಿ ಸಂಪೂರ್ಣ ನೀರಾವರಿ ಮಾಡುತ್ತಿದ್ದಾರೆ.

ತೋಟದ ಬದುವಿನ ಸುತ್ತಲೂ 100 ತೆಂಗಿ ಮರಗಳನ್ನು ಬೆಳೆಸಿದ್ದಾರೆ. 250 ಲಿಂಬೆ, 20 ಸಪೋಟಾ, 10 ಚಿಕ್ಕು ಗಿಡಗಳು, 15 ಜಂಬು ನೇರಳೆ ಗಿಡಗಳು, 80 ಕರಿಬೇವಿನ ಗಿಡಗಳು, 25 ಪಪ್ಪಾಯಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ವರ್ಷವಿಡೀ ಆದಾಯ ಪಡೆಯುತ್ತಿದ್ದಾರೆ.

ಒಂದೂವರೆ ಎಕರೆಯಲ್ಲಿ ವಿವಿಧ ಧಾನ್ಯ, ತರಕಾರಿ ಹಾಗೂ 30 ರೀತಿಯ ಬೇರೆಬೇರೆ 60 ಔಷಧ ಗಿಡಗಳನ್ನು ಬೆಳೆದಿದ್ದಾರೆ. ಚಕ್ರಮುನಿ, ಲೆಮನ್ ಗ್ರಾಸ್, ಬಿಲ್ವಪತ್ರೆ, ಇನ್ಸುಲಿನ್ ಹೀಗೆ ಅನೇಕ ಔಷಧ ಗಿಡಗಳನ್ನು ಬೆಳೆದಿದ್ದಾರೆ.

ಜಪಾನಿನ ಜನಪ್ರಿಯ ಕೃಷಿಕ ಮಸನೊಬು ಫುಕುವೊಕ ಅವರಿಂದ ಪ್ರೇರಿತರಾದ ತಳಕಲ್ ಗ್ರಾಮದ ಯುವಕ ನೈಸರ್ಗಿಕ ಪದ್ಧತಿಯ ಮೂಲಕ ಕೃಷಿಯಲ್ಲಿ ಯಶಸ್ಸನ್ನ ಕಂಡು ವರ್ಷಕ್ಕೆ ₹15 ಲಕ್ಷದಿಂದ ₹20 ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ.

ಯಾವುದೇ ಕುಂಟೆ, ಎಡೆ ಕೃಷಿ ಸಲಕರಣೆಗಳ ಮೂಲಕ ವ್ಯವಸಾಯವನ್ನು ಮಾಡದೇ ಅತ್ಯಂತ ಸರಳವಾಗಿ ಕೃಷಿಯಲ್ಲಿ ಯಶಸ್ಸು ಸಾಧಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾರೆ.

ಮಾ.8ರಂದು ಗ್ರಾಮದಲ್ಲಿ ರೈತರು ಹಾಗೂ ತಾವು ಸ್ವತಃ ಮಣ್ಣಿನೊಂದಿಗೆ ಮಾತುಕತೆ ಕಾರ್ಯಕ್ರಮವನ್ನು ಮಾಡುತ್ತಿದ್ದು, 500 ಜನ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹನುಮಂತಪ್ಪ ಹೇಳಿದರು.ತಮ್ಮ ತೋಟದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುತ್ತಿರುವ ರೈತ ಹನುಮಂತಪ್ಪ
ಸರ್ಕಾರಿ ನೌಕರಿಯನ್ನು ಬಿಟ್ಟು 15 ವರ್ಷಗಳಿಂದ ಕೃಷಿಯನ್ನು ನಂಬಿ ಯಶಸ್ಸು ಕಂಡಿದ್ದೇನೆ. ನೈಸರ್ಗಿಕ ಕೃಷಿ ಪದ್ಧತಿಯಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು

-ಹನುಮಂತಪ್ಪ ವಾಲಿಕಾರ್‌ ರೈತ

Leave a Reply

Your email address will not be published. Required fields are marked *