ಮಾನ್ವಿ : ಪಟ್ಟಣದ ಶ್ರೀ ರಾಜಾ ಹನುಮಪ್ಪ ನಾಯಕ ದೊರೆ ಸ್ಮಾರಕ ಸಮಾಜ ಸೇವಾ ಸಂಸ್ಥೆ ವತಿಯಿಂದ ಶ್ರೀ ರಂಗನಾಥ ವಿದ್ಯಾಲಯ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಅವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು. ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ವಿನಯವನ್ನು ನೀಡುವಂತಹ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸಲು ನೆರವಾಗುತ್ತವೆ. ಸಂಸ್ಕಾರಯುತ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗವಾಗುತ್ತದೆ ಎಂದು ಹೇಳಿದರು. ಮನೆ ಬಳಿಕ ಮಕ್ಕಳು ಹೆಚ್ಚು ಸಮಯವನ್ನು ಶಾಲೆಯಲ್ಲಿ ಗುರುಗಳೊಂದಿಗೆ ಕಳೆಯುವುದರಿಂದ ಗುರುಗಳಿಗೆ ಮಕ್ಕಳಲ್ಲಿ ತಂದೆ-ತಾಯಿ ಹಾಗೂ ಗುರುಗಳ ಬಗ್ಗೆ ಪೂಜ್ಯಭಾವನೆ ಬೆಳೆಸುವ ಜವಾಬ್ದಾರಿ ಇದೆ ಎಂದು ತಿಳಿಸಿದರು. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕು. ಹೆಣ್ಣುಮಕ್ಕಳಿಗೂ ಉನ್ನತ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಶ್ರೀ ರಂಗನಾಥ ವಿದ್ಯಾಲಯದ ಅಧ್ಯಕ್ಷರು ಹಾಗೂ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ರಾಜಾ ಸುಭಾಶ್ಚಂದ್ರ ನಾಯಕ ಮಾತನಾಡಿ, ಪಟ್ಟಣದ ಬಡ ಕುಟುಂಬಗಳ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಠ್ಯದ ಜೊತೆಗೆ ವಸತಿ ವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ, ಕ್ರೀಡೆಗಳಿಗೆ ಉತ್ತೇಜನ, ಕೋವಿಡ್ ಸಮಯದಲ್ಲಿ ಆಹಾರ ಕಿಟ್‌ಗಳ ವಿತರಣೆ, ರಾಜಾ ವಸಂತ ನಾಯಕ ಅವರ ಆಶಯದಂತೆ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಮಹಿಳಾ ದಿನಾಚರಣೆಯ ಮಹತ್ವ ಕುರಿತು ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮಿದೇವಿ ನಾಯಕ ವಕೀಲರು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಪಾದಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಲಕ್ಷ್ಮಿದೇವಿ, ಮುಖ್ಯಗುರು ಶರಣಮ್ಮ ಭಂಗಿ, ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಜಯಲಕ್ಷ್ಮಿ, ಬಿ.ವಿ.ಆರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪದ್ಮವತಿ, ಬಿ.ವಿ.ಆರ್ ಕಿಡ್ಸ್ ಮುಖ್ಯಸ್ಥರಾದ ಅಮರವಾಣಿ, ಆರ್ಟ್ ಆಫ್ ಲಿವಿಂಗ್ ತಾಲೂಕು ಸಂಚಾಲಕರಾದ ರಾಣಿವನಮಾಲದೇವಿ, ಪೂಜಾ ವಕೀಲರು, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ ಪೋತ್ನಾಳ್ ಕಾರ್ಯದರ್ಶಿ ಮುಮ್ತಾಜ್ ಬೇಗಂ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಪೋತ್ನಾಳ್ ಕಾರ್ಯದರ್ಶಿ ಸಾರಾ ಆರ್ ತಾಳಿಕೋಟೆ, ಶೈನಾಜ್ ಬೇಗಂ, ವಿಶ್ವಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗೀತಾ ಹಿರೇಮಠ, ರೈಸಿಂಗ್ ಸನ್ ಶಾಲೆಯ ಮುಖ್ಯಸ್ಥರಾದ ಹೀನಾ ಆಜ್ಮೀರ್ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *