ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ- ಆರ್.ಬಸನಗೌಡ ತುರ್ವಿಹಾಳ

ಮಸ್ಕಿ: ಮಹಿಳೆಯರ ಸಾಧನೆ ಸಮಾಜದ ಅಭಿವೃದ್ಧಿಗೆ ಬಲವಾದ ನೆಲೆಯಾಗಿದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಅಭಿಪ್ರಯಾ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷದ ಮಾರ್ಚ್ ೮ ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ದಿನವೇ ಮಹಿಳಾ ದಿನಾಚರಣೆ. ಹಿಂದೆ ಮಹಿಳೆಯರು ಮನೆಗೆ ಮಾತ್ರ ಸೀಮಿತರಾಗಿದ್ದರೆ, ಇಂದು ಶಿಕ್ಷಣ, ರಾಜಕೀಯ, ವಿಜ್ಞಾನ, ಕ್ರೀಡೆ, ಉದ್ಯಮ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ದೇಶದ ಪ್ರಗತಿಗೆ ಪ್ರಮುಖ ಪಾತ್ರವಹಿಸುತ್ತಿದ್ದಾರೆಂದು ಹೇಳಿದರು.
ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಸಹಾಯ ಸಂಘಗಳು, ಉದ್ಯೋಗಾವಕಾಶಗಳು, ಶಿಕ್ಷಣ ಹಾಗೂ ಆರೋಗ್ಯದ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಪರಿಣಾಮವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳೆಯರ ಸ್ವಾವಲಂಬನೆ ಹೆಚ್ಚುತ್ತಿದೆ. ಮಹಿಳೆಯರಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ೫ ಗ್ಯಾರಂಟಿಳಲ್ಲಿ ವಿಶೇಷವಾಗಿ ೪ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದೆ ಎಂದರು. ಇನ್ನೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಲಿಂಗ ಸಮಾನತೆ, ಸುರಕ್ಷತೆ, ಉದ್ಯೋಗದಲ್ಲಿ ಸಮಾನ ಅವಕಾಶಗಳು ಹಾಗೂ ಆರ್ಥಿಕ ಸ್ವಾವಲಂಬನೆ ಇನ್ನೂ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಮಹಿಳೆಯರ ಗೌರವ ಮತ್ತು ಹಕ್ಕುಗಳನ್ನು ಕಾಪಾಡುವಲ್ಲಿ ಸಮಾಜದ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ ಎಂದರು.
ಪ್ರಸ್ತಾವಿಕವಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ ಮಾತನಾಡಿ ಮಹಿಳೆಯರನ್ನು ಗೌರವಿಸುವುದೇ ನಿಜವಾದ ಮಹಿಳಾ ದಿನಾಚರಣೆಯ ಅರ್ಥವಾಗಿದೆ. ಮಹಿಳೆಯರು ಕುಟುಂಬದ ಬೆನ್ನೆಲುಬಾಗಿದ್ದು, ಮಕ್ಕಳ ಶಿಕ್ಷಣದಿಂದ ಹಿಡಿದು ಕುಟುಂಬದ ಅಭಿವೃದ್ಧಿವರೆಗೆ ಮಹತ್ವದ ಹೊಣೆ ಹೊರುತ್ತಿದ್ದಾರೆ. “ಮಹಿಳೆ ಶಿಕ್ಷಣ ಪಡೆದರೆ ಒಂದು ಕುಟುಂಬವೇ ಶಿಕ್ಷಣ ಪಡೆಯುತ್ತದೆ” ಎಂಬ ಮಾತು ಇಂದು ಹೆಚ್ಚು ಪ್ರಸ್ತುತವಾಗಿದೆ. ಶಿಕ್ಷಣ ಮತ್ತು ಅವಕಾಶಗಳು ದೊರೆತಾಗ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಪುರುಷರಿಗೆ ಸಮನಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಸಾಧನೆ ಮಾಡಬಹುದು ಎಂಬುದನ್ನು ಅನೇಕ ಉದಾಹರಣೆಗಳಿವೆ. ಮಹಿಳೆಯರ ಶಕ್ತಿ, ಧೈರ್ಯ ಹಾಗೂ ತ್ಯಾಗವೇ ಸಮಾಜದ ಅಭಿವೃದ್ಧಿಗೆ ಮೂಲಭೂತ ಶಕ್ತಿ. ಆದ್ದರಿಂದ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ನೀಡುವು ಸಲುವಾಗಿ ರಾಜಕೀಯದಲ್ಲಿ ೫೦% ಮೀಸಲಾತಿ ನೀಡಿರುವುದು ಸಮಾನತೆಯ ಸಮಾಜ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ, ಮಹಿಬೂಬ ಮುದ್ದಾಪೂರ, ಸಿಡಿಪಿಒ ಅಶೋಕ, ಆದಪ್ಪ ಕುಂಬಾರ, ಪಂಪಾಪತಿ ಹೂಗಾರ, ವೆಂಕಟೇಶ, ಶ್ರೀದೇವಿ, ವಿಶೇಷ ಉಪನ್ಯಾಸಕಿ ಸಂಗೀತ ಸೇರಿದಂತೆ ಗ್ಯಾರಂಟಿ ಯೋಜನೆ ಸದಸ್ಯರಾದ ಪೌಲರಾಜ ಯದ್ದಲದಿನ್ನಿ, ನಾಗರತ್ನ ಕಟ್ಟಿಮನಿ, , ನಿಜಗುಣಿ ಸರ್ಜಾಪೂರ, ಆಲಂಬಾಷ ಸೇರಿದಂತೆ ಇನ್ನಿತರರಿದ್ದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆ ಯೋಜನೆ ಮಾಡಲಾಗಿದ್ದ ಆರೋಗ್ಯ ಶಿಬಿರದಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳ ಸೇರಿದಂತೆ ಇನ್ನಿತರ ತಾಲೂಕ ಅಧಿಕಾರಿಗಳು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.

Leave a Reply

Your email address will not be published. Required fields are marked *