ಇನ್ನೇನು ಬೇಸಿಗೆ ಪ್ರಾರಂಭವಾಗಿದೆ ತಾಲೂಕಿನ ಸಮಸ್ತ ಜನತೆಗೆ ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆ ಬರಬಾರದು, ಯಾವ ಗ್ರಾ.ಪಂ.ಯಲ್ಲಿ ಎಷ್ಟರ ಮಟ್ಟಿಗೆ ಮತ್ತು ಇನ್ನು ಎಷ್ಟು ದಿನಗಳ ಕಾಲ ಜನರಿಗೆ ನೀರನ್ನು ಸರಬರಾಜು ಮಾಡಬಹುದು ಎಂಬ ಲೆಕ್ಕಾಚಾರವನ್ನು ಶಾಸಕ ಹಂಪನಗೌಡ ಬಾದರ್ಲಿ ಗ್ರಾ.ಪಂ.ಪಿಡಿಒ ಮತ್ತು ಅಧಿಕಾರಿಗಳಿಗೆ ಮಾಹಿತಿ ಕೇಳಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಶಾಸಕ ಹಂಪನಗೌಡ ಬಾದರ್ಲಿಯವರ ನೇತೃತ್ವದಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆದು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯತಿ ಪಿಡಿಒ, ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಇದೆ ಎಂದರು.

ತಾಲೂಕಿನ ಎಲ್ಲಾ ಗ್ರಾ.ಪಂ.ವ್ಯಾಪ್ತಿಯಲ್ಲಿನ ಪಿಡಿಒ ಅವರು, ಸಧ್ಯಕ್ಕೆ ಒಂದೆರಡು ತಿಂಗಳ ಮಟ್ಟಿಗೆ ಕುಡಿವ ನೀರಿನ ಸಮಸ್ಯೆ ತಲೆದೂರದು, ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಎಲ್ಲಿಯಾದರೂ ನೀರಿನ ಬಗ್ಗೆ ಸಮಸ್ಯೆ ಬಂದರೆ ಅದಕ್ಕೆ ನೀವೆ ಜವಾಬ್ದಾರಿಗಳು, ಕಾರಣ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ಪ್ರಯುಕ್ತ ಬೇಕಾದ ಹಣದ ಯೋಜನೆಯ ವರದಿ ರೆಡಿ ಮಾಡಿ ನನಗೆ ನೀಡಿದರೆ, ನಿಮಗೆ ಎಷ್ಟು ಅನುದಾನ ಬೇಕೆಂದು ಕೊಡಿ, ಸರ್ಕಾರದಿಂದ ಅನುದಾನವನ್ನು ಒದಗಿಸಿ ಕೊಡುತ್ತೇನೆ, ಯಾವುದೇ ಕಾರಣಕ್ಕೂ ಕುಡಿವ ನೀರಿನ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವನ್ನು ಮಾಡಬೇಡಿ ಎಂದರು.

ದಿದ್ದಿಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಸಮಸ್ಯೆ ಬಗೆಹರಿಸುವಂತೆ ಪಿಡಿಒ. ತಾಲುಕಾ ಪಂಚಾಯತ ಇಒ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಈಗಾಗಲೇ ದೂರು ನೀಡಿದರು ಸಹ ಈ ಸಮಸ್ಯೆಯನ್ನು ಬಗೆ ಹರಿಸಿಲ್ಲ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮೌನೇಶ ಸಭೆಗೆ ಹಾಜರಾಗಿ ಶಾಸಕರ ಗಮನಕ್ಕೆ ತಂದಾಗ ಸಮಸ್ಯೆ ಬಗೆಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಅಲಬನೂರು ಗ್ರಾಮದಲ್ಲಿ ಬಡವರಿಗೆ ನಿವೇಶನ ಕೊಡುವ ಉದ್ದೇಶದಿಂದ ಮೀಸಲಿಟ್ಟ 6 ಎಕರೆ 12 ಗುಂಟೆ ಸರ್ಕಾರಿ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಪೊಲೀಸರ ಸಹಕಾರದಿಂದ ಒತ್ತುವರಿಯಾದ ಜಾಗವನ್ನು ತೆರವು ಕಾರ್ಯಚರಣೆ ಮಾಡುವಂತೆ ಶಾಸಕರು ಪಿಡಿಒ ಮತ್ತು ಸರ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ರೀತಿ ತಾಲೂಕಿನ ಬಸವರಾಜಶ್ವರಿ ಕ್ಯಾಂಪಿನಲ್ಲಿ 2 ಎಕರೆ 16 ಗುಂಟೆ ಜಾಗವು ಕೂಡ ರಾಜ್ಯಪಾಲಕರ ಹೆಸರಿನಲ್ಲಿದ್ದು, ಸರ್ವೇ ಅಧಿಕಾರಿಗಳು 2024ರ ಡಿಸೆಂಬರ್ 22ರಲ್ಲಿ ಇಸ್ಸಾ ನಕ್ಷೆ ಬದಲಾಯಿಸಿ ಈಗ ಸರ್ಕಾರಿ ಜಾಗವನ್ನು ಇಲ್ಲದಂತೆ ಮಾಯ ಮಾಡಿ ಬೇರೆಯವರಿಗೆ ಮಾರಾಟ ಮಾಡಲು ಅನುಕೂಲ ಮಾಡಿದ್ದು, ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ತಪ್ಪು ಮಾಡಿದ ಸರ್ವೇ ಅಧಿಕಾರಿಯಾಗಲಿ ಯಾರೇ ಆಗಲಿ ಅಮಾನತು ಮಾಡುವಂತೆ ಸರ್ವೆ ಎಡಿಎಲ್ ಆರ್, ಬೀಮರಾಜ ಹವಾಲ್ದಾರಿಗೆ ಸೂಚನೆ ನೀಡಿ ವರದಿ ನೀಡುವಂತೆ ತಾಕೀತು ಮಾಡಿದರು.

ಜೆ.ಜೆ.ಎಂ. ಯೋಜನೆಯ ಅಡಿಯಲ್ಲಿ ಕೆಲವು ಕಾಮಗಾರಿಗಳು ನಡೆದಿದ್ದು, ಇನ್ನೂ ಕೆಲವು ಪ್ರಗತಿ ಹಂತದಲ್ಲಿವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ವಿಜಯಲಕ್ಷ್ಮೀ ಸಭೆಗೆ ಮಾಹಿತಿ ನೀಡಿದರು. ನಿರ್ಮಿತ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿ ಅಧಿಕಾರಿಗಳು ಸಿಡಿಪಿಓ ತಮ್ಮ ಇಲಾಖೆಯಿಂದ ನಡೆದ ಕಾಮಗಾರಿಗಳ ಪ್ರಗತಿ ವರದಿಯನ್ನು ಸಭೆಗೆ ಒಪ್ಪಿಸಿದರು.

ಈ ವೇಳೆ: ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಶರಣಬಸವರಾಜ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಗ ಇಟಗಿ, ನಗರ ಪೊಲೀಸ್ ಠಾಣೆ.ಪಿ.ಐ.ವೀರಾರೆಡ್ಡಿ, ಗ್ರಾಮೀಣ ಸಿಪಿಐ ವಿನಾಯಕ, ಸೇರಿಂದತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳು, ನೀರಾವರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *