ಮಸ್ಕಿ: ಒಳ ಮೀಸಲಾತಿಯಿಂದ ಬಲಗೈ, ಬಂಜಾರ, ಭೋವಿ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗುತ್ತಿರುವದರಿಂದ ಹಳೆ ಮೀಸಲಾತಿಯ ಶೇ.೫೦ರನ್ವಯ ೫೬ ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರವಿ ಚಿಗರಿ ಮಾತನಾಡಿ, ಒಳಮೀಸಲಾತಿ ಗೊಂದಲಗಳು ಪರಿಹಾರವಾಗುವ ತನಕ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನ್ವಯಿಸಿ, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಜಾರಿಗೆ ತಂದಿರುವ ಒಳಮೀಸಲಾತಿ ವರದಿ ಸಂಬAಧಿತ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗುವ ತನಕ, ಪ್ರಸ್ತುತ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯೋಗಗಳಿಗೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯಚಟುವಟಿಕೆಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು. ಹೊಸ ಜಾತಿ ಪ್ರಮಾಣ ಪತ್ರಗಳ ವಿತರಣೆ ತುರ್ತಾಗಿ ನಿಲ್ಲಿಸಿ, ಈಗಾಗಲೇ ನೀಡಿರುವ ಹಳೆಯ ಜಾತಿ ಪ್ರಮಾಣ ಪತ್ರಗಳನ್ನೇ ಮುಂದುವರೆಸಬೇಕು. ಒಳಮೀಸಲಾತಿಗೆ ಸಂಬAಧಿಸಿದ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ, ನ್ಯಾಯ ಸಮ್ಮತವಾಗಿ ಸರಿಪಡಿಸಬೇಕೆಂದರು.
ಬಲಗೈ ಮುಖಂಡ ಮೌನೇಶ ದೊಡ್ಡಮನಿ ಅಮೀನಗಡ ಮಾತನಾಡಿ ಒಳಮೀಸಲಾತಿ ಅನ್ಯಾಯವನ್ನು ಒಂದು ವಾರದೊಳಗೆ ಬಗೆಹರಿಯದಿದ್ದರೆ ಸಮುದಾಯದಿಂದ ಸಭೆ ನಡೆಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ದೇವಪ್ಪ ರಾಠೊಡ್ ಮಾತನಾಡಿ, ಶಿಕ್ಷಣ, ಹಾಸ್ಟೇಲ್ ಪ್ರವೇಶ ಮತ್ತು ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶ, ಸುತ್ತೋಲೆಗಳನ್ನು ಕೂಡಲೇ ಹಿಂಪಡೆಯಬೇಕು, ಈಗಾಗಲೇ ನಡೆಸಲಾಗಿರುವ ವಿವಿಧ ಇಲಾಖೆ, ನಿಗಮ, ಪ್ರಾಧಿಕಾರದ ನೇಮಕಾತಿಗಳನ್ನು ರದ್ದುಗೊಳಿಸಿ ಪರಿಶಿಷ್ಟ ಜಾತಿ ಪ್ರವರ್ಗ ಎ,ಬಿ,ಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣ ಪತ್ರಗಳನ್ನು ಹಿಂಪಡೆದು, ಹಳೆ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕೆಂದರು. ಮುಂಬವರುವ ಆಧಿವೇಶನದಲ್ಲಿ ಶಾಸಕ ಆರ್.ಬನಸಗೌಡ ತುರವಿಹಾಳ ಈ ಬಗ್ಗೆ ಸದನದಲ್ಲಿ ಚರ್ಚಿಸಿ ಅಪ್ರಾಯೋಗಿಕ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೈ ಬಿಡಲು ಒತ್ತಡ ಹೇರಬೇಕು, ರಾಜ್ಯ ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ವರ್ಗೀಕರಣಕ್ಕೆ ಮುಂದಾದರೆ ಬಲಗೈ, ಬಂಜಾರ, ಭೋವಿ, ಚರ್ಮಗಾರ, ಸಮಾಗಾರ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳು ಜಂಟಿಯಾಗಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಲ್ಲಯ್ಯ ನಾಗರಾಳ, ರಂಗಪ್ಪ ಅರಿಕೇರಿ, ಯಂಕೋಬ ಭಜಂತ್ರಿ, ತಿಮ್ಮಣ್ಣ ಗುಡಸಲಿ ಇದ್ದರು.

