ಜಾಲಹಳ್ಳಿ : ಗ್ರಾಮದಲ್ಲಿ ನಾಡ ತಹಶೀಲ್ದಾರ್ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಗ್ರಾಮ ಸಮಿತಿಯ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್ ಅವರು, ಸುಮಾರು ಏಳು ತಿಂಗಳ ಹಿಂದೆ ಮಾನ್ಯ ಶಾಸಕಿ ಕರಿಯಮ್ಮಾ ಜಿ. ನಾಯಕ್ ಅವರು ಜಾಲಹಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಇಂದಿಗೂ ಆ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಈಗಾಗಲೇ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿದರು.

ಅದೇ ರೀತಿ ಜಾಲಹಳ್ಳಿಯಲ್ಲಿ ನೆನಗುದಿಗೆ ಬಿದ್ದಿರುವ ವಾಲ್ಮೀಕಿ ಭವನವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ವಾಲ್ಮೀಕಿ ಭವನ ಪೂರ್ಣಗೊಳಿಸಲು ಹೋರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಅವರು ಖಂಡಿಸಿದರು.

ಇನ್ನೂ ಅಂಬೇಡ್ಕರ್ ವೃತ್ತದಿಂದ ಶ್ರೀ ರಂಗನಾಥ ದೇವಸ್ಥಾನವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಮತ್ತು ಬುಳ್ಳಯ್ಯನ ಕಟ್ಟಿಯಿಂದ ಹಟ್ಟಿ ಮುಖ್ಯ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು

1. ಅಂಬೇಡ್ಕರ್ ವೃತ್ತದಿಂದ ಶ್ರೀ ರಂಗನಾಥ ದೇವಸ್ಥಾನವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ

2. ಬುಳ್ಳಯ್ಯನ ಕಟ್ಟಿಯಿಂದ ಹಟ್ಟಿ ಮುಖ್ಯ ರಸ್ತೆಯವರೆಗೆ ರಸ್ತೆ ನಿರ್ಮಾಣ

3. ಜಾಲಹಳ್ಳಿ ಗ್ರಾಮದ ಮುಖ್ಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ ಅಳವಡಿಕೆ

4. ಜಾಲಹಳ್ಳಿ ಗ್ರಾಮದಲ್ಲಿ ನೆನಪಿಗೆ ಬಿದ್ದಿರುವ ವಾಲ್ಮೀಕಿ ಭವನವನ್ನು ಪೂರ್ಣಗೊಳಿಸುವುದು

 

ಈ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಸಮಿತಿ ಅಧ್ಯಕ್ಷ ಹನುಮಂತ ಮಡಿವಾಳ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಘಟಕದ ಪದಾಧಿಕಾರಿಗಳು, ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೀರೇಶ್, ಅರಕೇರಿ ಗ್ರಾಮ ಪಂಚಾಯತ್ ಸದಸ್ಯ ತಿಮ್ಮಣ್ಣ ನಾಯಕ್ ದಿವಾನ್, ಮಕ್ತೂಮ್ ಪರಾಶಿ, ಶಿವ ಮಾನ್ಯಪ್ಪ ತ್ಯಾಪ್ಲಿ, ರಂಗನಾಥ್ ಕುದ್ರಿ ಸೇರಿದಂತೆ ಹಲವರು ಹಾಜರಿದ್ದರು.

ಸಂಘಟನೆ ಪದಾಧಿಕಾರಿಗಳಾದ ಹನುಮಂತ ಮಡಿವಾಳ, ಮೌನೇಶ್ ದಾಸರ್, ರಂಗನಾಥ್ ಬುಕ್ಕಲಗಡ್ಡಿ, ರಿಯಾಜ್ ಅರ್ತಿ, ಮಹಾಲಿಂಗ ದೊಡ್ಡಮನಿ, ಕಲೀಮುದ್ದಾರ್, ಬಸವರಾಜ್ ಒಂದಲಿ, ಹನುಮಂತ ಗಣೆಕಲ್, ರಾಜು ನಾಯಕ್, ಮಲ್ಲು ಗೌಡರು ಹಾಗೂ ಊರಿನ ಪ್ರಮುಖರಾದ ರಾಜ ತಿಮ್ಮಪ್ಪ ನಾಯಕ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಂಗನಾಥ್ ಮಕಸಿ, ವಿನೋದ್ ಚಿಕಲ್, ಬಸವರಾಜ್ ಮಂಡಲಗುಡ್ಡ, ರಂಗಪ್ಪ ತೊಗರಿ, ದುರ್ಗಪ್ಪ ಅಗಸಿ ಮನೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *