ಮಾನ್ವಿ : ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಮಂಡಿಸಿದ 2026–27ನೇ ಸಾಲಿನ ಕರ್ನಾಟಕ ಬಜೆಟ್ ವಿಕಲಚೇತನರ ದೃಷ್ಟಿಯಿಂದ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಕಲ್ಪ ವಿಕಲಚೇತನರ ಒಕ್ಕೂಟದ ವತಿಯಿಂದ ಈ ಹಿಂದೆ ರಾಜ್ಯ ಸರ್ಕಾರಕ್ಕೆ ವಿಕಲಚೇತನರ ವಿವಿಧ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ವಿಶೇಷವಾಗಿ ವಿಕಲಚೇತನರ ಮಾಸಿಕ ಪಿಂಚಣಿಯನ್ನು ಹೆಚ್ಚಿಸುವುದು, ಎಲ್ಲಾ ವಿಕಲಚೇತನರಿಗೆ ರಾಜ್ಯಮಟ್ಟದ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸುವುದು, ವಿಕಲಚೇತನರಿಗಾಗಿ ಮೀಸಲಾದ 5% ಅನುದಾನದ ಸಮರ್ಪಕ ಬಳಕೆ ಹಾಗೂ ಗ್ರಾಮ ಪಂಚಾಯಿತಿ, ಪಟ್ಟಣ, ನಗರ ಮತ್ತು ತಾಲೂಕು ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳನ್ನು ಶಾಶ್ವತಗೊಳಿಸಿ ಅವರಿಗೆ ಸಮರ್ಪಕ ವೇತನ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗಿತ್ತು.
ಇದಲ್ಲದೆ UDID ಕಾರ್ಡ್ ಮತ್ತು ವಿಕಲಚೇತನ ಪ್ರಮಾಣಪತ್ರಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸಿ, ವಿಕಲಚೇತನರಿಗೆ ವಿಶೇಷ ವಸತಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಹಲವು ನ್ಯಾಯಸಮ್ಮತ ಬೇಡಿಕೆಗಳನ್ನು ಒಕ್ಕೂಟದ ವತಿಯಿಂದ ಮನವಿ ಪತ್ರಗಳ ಮೂಲಕ ಸಲ್ಲಿಸಲಾಗಿತ್ತು. ಆದರೆ ಈ ಎಲ್ಲ ಬೇಡಿಕೆಗಳ ಕುರಿತು 2026–27ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಘೋಷಣೆ ಮಾಡದೇ ಇರುವುದರಿಂದ ವಿಕಲಚೇತನ ಸಮುದಾಯದಲ್ಲಿ ತೀವ್ರ ನಿರಾಸೆ ಮತ್ತು ಅಸಮಾಧಾನ ಉಂಟಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಲಕ್ಷಾಂತರ ವಿಕಲಚೇತನರು ಜೀವನೋಪಾಯ, ಶಿಕ್ಷಣ, ಚಿಕಿತ್ಸೆ ಮತ್ತು ಸಂಚಾರ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ವಿಕಲಚೇತನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ಬದುಕಿನ ಮಟ್ಟವನ್ನು ಸುಧಾರಿಸಲು ವಿಶೇಷ ಯೋಜನೆಗಳು ಮತ್ತು ಅನುದಾನಗಳನ್ನು ಘೋಷಿಸಬೇಕಿತ್ತು. ಆದರೆ ಬಜೆಟ್‌ನಲ್ಲಿ ಈ ವಿಷಯಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಇರುವುದರಿಂದ ವಿಕಲಚೇತನರ ನಿರೀಕ್ಷೆಗಳು ಭಂಗಗೊಂಡಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಹಿಂದುಳಿದ ಮತ್ತು ವಿಶೇಷ ಚೇತನರ ಸಮಸ್ಯೆಗಳ ಬಗ್ಗೆ ಸರ್ಕಾರವು ಹೆಚ್ಚು ಸ್ಪಂದನಾಶೀಲತೆಯಿಂದ ನಡೆದುಕೊಳ್ಳಬೇಕಾಗಿದೆ. ವಿಕಲಚೇತನರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಪರಿಗಣಿಸಿ, ಅವರ ಹಕ್ಕು ಮತ್ತು ಸಬಲೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ಆಗ್ರಹಿಸಿದರು.

Leave a Reply

Your email address will not be published. Required fields are marked *