ರಾಯಚೂರು ಮಾರ್ಚ್ 06 (ಕರ್ನಾಟಕ ವಾರ್ತೆ): ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ಸಂದೇಶದಡಿ ಮಾರ್ಚ 6ರಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಡೆದ ಬೃಹತ್ ವಾಕಥಾನ್ ರಾಯಚೂರು ನಗರದಲ್ಲಿ ಹೊಸ ಸಂಚಲನ ಮೂಡಿಸಿತು.
ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಕಥಾನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಬೆಳ್ಳಂ ಬೆಳಗ್ಗೆಯೇ, ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಏರಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಪೊಲೀಸ್ ಫರೇಡ್ ಮೈದಾನದತ್ತ ಆಗಮಿಸಿದರು. ಬೃಹತ್ ವಾಕಥಾನ್‌ದಲ್ಲಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನವೋದಯ ಶಿಕ್ಷಣ ಸಂಸ್ಥೆ, ಸೆಂಟ್ರಲ್ ಸ್ಕೂಲ್, ಕೆಪಿಎಸ್‌ವಿಎಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಪೂರ್ಣಿಮಾ ಆಯುರ್ವೇದಿಕ್ ಕಾಲೇಜ್, ಶಿಲ್ಪಾ ಮೆಡಿಕೇರ್, ನಂದಿನಿ ಮೆಡಿಕಲ್ ಕಾಲೇಜ್, ನವೋದಯ ದಂತ್ ಕಾಲೇಜ್, ವಿಎಲ್ ಕಾಲೇಜ್ ಆಫ್ ಫಾರ್ಮಸಿ ಸೇರಿದಂತೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಅಂದಾಜು 5000 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದೆ ವೇಳೆ, ಅಂಗಾಂಗ ಜಾಗೃತಿಯ ಅಭಿಯಾನವು ನಡೆಯಿತು.
ಪೂಜ್ಯರ ಆಗಮನದಿಂದ ಬಲ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥರು ರಾಯಚೂರು ನಗರಕ್ಕೆ ಆಗಮಿಸಿ ವಾಕಥಾನ್‌ದಲ್ಲಿ ಭಾಗಿಯಾಗಿ ಅಭಿಯಾನಕ್ಕೆ ಬಲ ತುಂಬಿದರು. ಜಿಲ್ಲಾ ಪೊಲೀಸ್ ಮೈದಾನದ ಆವರಣದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ಶ್ರೀಗಳು ಆಗಮಿಸುತ್ತಿದ್ದಂತೆ ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ಹೆಚ್ಚಿನ ಬಲ ಬಂದಿತು. ಬೃಹತ್ ವಾಕಥಾನ್‌ಗೆ ಶ್ರೀಗಳು ವಿದ್ಯುಕ್ತ್ ಚಾಲನೆ ನೀಡಿದರು. ಪೊಲೀಸ್ ಫರೇಡ್ ಮೈದಾನದಿಂದ ಸಾಲಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು ಜನಜಾಗೃತಿಯ ಫಲಕಗಳನ್ನು ಕೈಯಲ್ಲಿ ಹಿಡಿದು ಸಾಗಿದರು. ದ್ವಿಚಕ್ರ ಸೇರಿದಂತೆ ಇನ್ನೀತರ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ವಿದ್ಯಾರ್ಥಿಗಳು ಒಗ್ಗೂಡಿ ಬೀದಿಗಿಳಿದು ಜನಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಗಮನ ಸೆಳೆದ ಫಲಕಗಳು: ನಿಮ್ಮ ಬದುಕು ಅಮೂಲ್ಯ ವ್ಯವಸಕ್ಕೆ ಬಲಿಯಾಗಬೇಡಿ., ಡ್ರಗ್ಸ್ ಅಂದರೆ ಸಾವಿನ ಬಲೆ, ಒಂದು ಸುಟ್ಟು ಹೋದ ಸೀಗರೇಟು ಹೇಳುತ್ತದೆ ಇವತ್ತು ನನ್ನ ಸಾವಿಗೆ ಕಾರಣ ನೀನು ನಾಳೆ ನಿನ್ನ ಸಾವಿಗೆ ಕಾರಣ ನಾನು., ನಶೆ ರಹಿತ ಜೀವನವೇ ನಿಜವಾದ ಸ್ವಾತಂತ್ರö್ಯ., ನಶೆ ಮುಕ್ತ ಜೀವನ ಸಂತೃಪ್ತ ಜೀವನ., ಯುವರ್ ಲೈಫ್ ಈಸ್ ಪ್ರೀಸಿಯೆಸ್ ಡೋಂಟ್ ವೇಸ್ಟ್ ಇಟ್ ಆನ್ ಡ್ರಗ್ಸ್., ಬಿ ಸ್ಮಾರ್ಟ ಡೋಂಟ್ ಸ್ಟಾರ್ಟ ಡ್ರಗ್ಸ್ ಎನ್ನುವಂತಹ ಜನಜಾಗೃತಿ ಫಲಕಗಳು ವಾಕಥಾನ್ ವೇಳೆ ಗಮನ ಸೆಳೆದವು.
ಶ್ರೀಗಳ ಸಂದೇಶ: ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಮನುಷ್ಯ ತನ್ನ ಜೀವನದ ಬಗ್ಗೆ ಸಹ ಹೆಚ್ಚಿನ ಗಮನ ಕೊಡಬೇಕು. ಕುಡಿತ, ಗಾಂಜಾ ಸೇವನೆ, ಸೀಗರೇಟ್ ಸೇವನೆಯಂತಹ ಕೆಟ್ಟ ಚಟಗಳಿಂದ ಪ್ರತಿಯೊಬ್ಬರು ದೂರ ಇರಬೇಕು. ನಶಮುಕ್ತನಾಗಿರುತ್ತೇನೆ ಎಂದು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು. ತನ್ನ ಸುತ್ತಲಿನವರಿಗೂ ದುಶ್ಚಟಗಳಿಂದ ದೂರ ಇರುವಂತೆ ಸಲಹೆ ಮಾಡಬೇಕು ಎಂದು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ನಾವು ಹಣ ಕೊಟ್ಟು ರೋಗ-ರುಜಿನ ತೆಗೆದುಕೊಳ್ಳುತ್ತಿದ್ದೇ  . 2018ರ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲಿ 30 ಕೋಟಿಗೂ ಹೆಚ್ಚು ಜನರು ಮಾದಕ ವ್ಯಸನಿಗಳಾಗಿದ್ದಾರೆ. ಅದರಲ್ಲಿ 10 ಕೋಟಿಯಷ್ಟು ಜನರು ಭಾರತೀಯರು ಎಂಬುದು ಆತಂಕಕಾರಿ ಸಂಗತಿ ಎಂದರು. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು. ಜನಸಾಮಾನ್ಯರಿಗೆ ವಿದ್ಯಾವಂತರು ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದರು.
ಜಿಲ್ಲಾಧಿಕಾರಿಗಳು ಭಾಗಿ: ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಭಾಗಿಯಾದರು. ಈ ವೇಳೆ ಅವರು ಮಾತನಾಡಿ, ರಾಯಚೂರು ಜಿಲ್ಲೆಗೆ ಈ ದಿನ ಒಂದು ಮಹತ್ವವಾದ ದಿನವಾಗಿದೆ ಎಂದು ಸೇರಿದ್ದ ವಿದ್ಯಾರ್ಥಿ ಸಮೂಹವನ್ನು ಕಂಡು ಅಭಿಯಾನದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ದೂರದ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿ, ಎಲ್ಲ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ರೀತಿ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದು ಸಮಾಜಮುಖಿ ಕಾರ್ಯವಾಗಿದೆ. ಈ ವಿಶ್ವವಿದ್ಯಾಲಯವು ಇದೆ ರೀತಿ ಜನಪಯೋಗಿ ಕಾರ್ಯಕ್ರಮಗಳನ್ನು ನಿರಂತರ ನಡೆಸಲಿ ಎಂದು ಆಶಿಸಿದರು.
ರಾಯಚೂರು ಗಡಿ ಹಂಚಿಕೊಂಡಿರುವುದರಿಂದ ಇಲ್ಲಿ ಡ್ರಗ್ಸ್ ಪದಾರ್ಥಗಳ ಸಾಗಣೆ, ಮಾರಾಟ ಸಾಧ್ಯತೆ ಇರುತ್ತದೆ. ಇಂತಹ ಜಾಲವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯು ಸನ್ನದ್ಧವಾಗಿದೆ. ಯುವಕರನ್ನು ದಾರಿ ತಪ್ಪಿಸುವ ಯಾವುದೇ ಆಘಾತಕಾರಿ ಕೃತ್ಯಗಳಿಗೆ ನಾವು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯ ಯಾವುದೇ ಕಡೆಗಳಲ್ಲಿ ಡ್ರಗ್ಸ್ ಮಾರಾಟ ಅಥವಾ ಸೇವೆನೆಯ ಪ್ರಕರಣಗಳ ಜಾಲವು ಕಂಡುಬಂದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ನಾವು ಪೊಲೀಸ್ ಇಲಾಖೆಯ ಮೂಲಕ ಅಂತಹ ಕೃತ್ಯವನ್ನು ಮಟ್ಟ ಹಾಕುತ್ತೇವೆ ಎಂದು ತಿಳಿಸಿದರು.
ಉತ್ತಮ ಸಂದೇಶದ ಪ್ರಯತ್ನ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಸಿ.ಭಗವಾನ್ ಅವರು ಮಾತನಾಡಿ, ನಮ್ಮ ಸಮಾಜಕ್ಕಾಗಿ ಉತ್ತಮ ಸಂದೇಶವೊಂದನ್ನು ಕೊಡಬೇಕು. ನಮ್ಮ ವಿದ್ಯಾರ್ಥಿಗಳನ್ನು ನಾವು ಆರೋಗ್ಯವಂತರಾಗಿ ಮಾಡಿದರೆ ಮುಂದಿನ ಸಮಾಜ, ಮುಂದಿನ ಭಾರತ, ಮುಂದಿನ ಕರ್ನಾಟಕ ಹಾಗೂ ಮುಂದಿನ ರಾಯಚೂರು ಜಿಲ್ಲೆಯನ್ನು ಸದೃಢವಾಗಿ ಕಟ್ಟಲು ಸಾಧ್ಯ ಆಗುತ್ತದೆ. ಆ ದಿಶೆಯಲ್ಲಿ ಯೋಚಿಸಿ, ಯೋಜಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸುಮಾರು ಮೂರು ದಶಕಗಳ ಹಿಂದೆ ಪ್ರಾರಂಭವಾಗಿದ್ದು, ಸುಮಾರು 12 ಜಿಲ್ಲೆಗಳಲ್ಲಿ ನಶಾಮುಕ್ತ ಅಭಿಯಾನ ನಡೆಸಿದ್ದು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ವಿಶ್ವವಿದ್ಯಾಲಯ ಪ್ರತಿವರ್ಷವೂ ನೂರಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ನೀಡುವ ಮೂಲಕ ಇಡೀ ದೇಶದಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಬೆಳೆದಿದೆ ಎಂದರು. ಕರ್ನಾಟಕ ರಾಜ್ಯ ಸರ್ಕಾರ, ಭಾರತ ಸರ್ಕಾರವು ನಮ್ಮ ಜೊತೆಗಿದೆ. ಜಿಲ್ಲೆಯ ಜನ ಪ್ರತಿನಿಧಿಗಳು ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ಬೆಂಬಲಿಸಿದ್ದು, ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದಲೇ ಎಲ್ಲ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ ಎಂದು ತಿಳಿಸಿದರು.
ಅಚ್ಚುಕಟ್ಟಾದ ಉಪಹಾರ ವ್ಯವಸ್ಥೆ: ಬೆಳಗ್ಗೆ ಪೊಲೀಸ್ ಫರೇಡ್ ಮೈದಾನದಿಂದ ಹೊರಟು ಎಪಿಎಂಸಿ ಸರ್ಕಲ್, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ವಾಕಥಾನ್ ಜಾಥಾದಡಿ ಆಗಮಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾಗಿ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ರಾಯಚೂರು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕಕ್ಕೆ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ದಿಶಾಭೋದ್ ಫೌಂಢೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇವರ ಸಹಯೋಗದೊಂದಿಗೆ ಸ್ವಾಸ್ತ್ಯ ಭಾರತ, ಶ್ರೇಷ್ಠ ಭಾರತ, ಯುವ ಶುದ್ಧಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ರಾಯಚೂರು ರಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ರಮೇಶ ಬಿ.ಹೆಚ್., ನವೋದಯ ಮೆಡಿಕಲ್ ಸಂಸ್ಥೆಯ ಮುಖ್ಯಸ್ಥರಾದ ಎಸ್.ಆರ್.ರೆಡ್ಡಿ, ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಸ್ಮಿತಾ ಅಕ್ಕನವರು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಿರೀಕ್ಷಕರಾದ ವಿಕಾಸ್ ಸಿಂಗ್, ದಿಶಾಭೋದ್ ಫೌಂಡೇಶನ್ ಡಾ.ಹರ್ಷ ಹರ್ದಾರ್, ಎಸ್.ಪಿ.ಚಿದಾನಂದ್, ನವೋದಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಾನಂದ, ಹೃದ್ರೋಗ ತಜ್ಞರು ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಭಾರಿ ವಿಶೇಷಾಧಿಕಾರಿ ಡಾ.ಮುರಳಿ ರಾವ್, ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ರೆಡ್ಡಿ, ನವೋದಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಕಟ್ಟಿ ಸೇರಿದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸೆನೆಟ್, ಸಿಂಡಿಕೇಟ್, ಅಕೆಡೆಮಿಕಲ್ ಕೌನ್ಸಿಲ್ ಸದಸ್ಯರು ಹಾಗೂ ವಿವಿಧ ಕಾಲೇಜುಗಳ ಆಡಳಿತ ಮಂಡಳಿ, ಅಧ್ಯಕ್ಷರು, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *