ರಾಯಚೂರು (ಕರ್ನಾಟಕ ವಾರ್ತೆ): ಜನಗಣತಿ-2027 ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ 3 ದಿನಗಳ ತರಬೇತಿ ಕಾರ್ಯಾಗಾರವು ಮಾರ್ಚ 4ರಂದು ಆರಂಭವಾಯಿತು.
ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಗಾರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ ಅವರು ಚಾಲನೆ ನೀಡಿ ಮಾತನಾಡಿ, ಈ ಜನಗಣತಿಯು ಡಿಜಿಟಲ್ ಮೋಡನಲ್ಲಿ ನಡೆಯಲಿದೆ. ಇಲ್ಲಿ ಬರುವ ಪ್ರಶ್ನಾವಳಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಈ ಜನಗಣತಿ ಕಾರ್ಯವು ಸಂವಿಧಾನ ಬದ್ಧವಾದ ಕರ್ತವ್ಯ ಎಂದು ಭಾವಿಸಿ, ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಯನುಸಾರ ಜನಗಣತಿ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರು ಮಾತನಾಡಿ, ಕರ್ನಾಟಕದಲ್ಲಿ ಜನಗಣತಿಯು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ. ಜನಗಣತಿ ನಿರ್ದೇಶನಾಲಯವು ನೀಡುವ ಯಾವುದೇ ಬಗೆಯ ಮಾರ್ಗಸೂಚಿಗಳನ್ನು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಅರ್ಥೈಸಿಕೊಂಡು ಜನಗಣತಿ ಪ್ರಕ್ರಿಯೆಯಲ್ಲಿ ಶ್ರದ್ಧೆಯಿಂದ ಭಾಗಿಯಾಗಬೇಕು ಎಂದು ತಿಳಿಸಿದರು.
ಜನಗಣತಿಯ ಹಿನ್ನೆಲೆ, ಜನಗಣತಿಯ ಪ್ರಕ್ರಿಯೆ, ಜನಗಣತಿಯ ವಿಧಾನಗಳು, ಜನಗಣತಿಯಲ್ಲಿ ಭಾಗಿಯಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಗಳ ಬಗ್ಗೆ ತರಬೇತಿಯಲ್ಲಿ ಸಮಗ್ರ ವಿವರಿಸಲಾಯಿತು.
ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಲಿಂಗಸೂರ ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಡಾ.ಟಿ.ರೋಣಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ಸಹಾಯಕ ನಿರ್ದೇಶಕರಾದ ಬಸವರಾಜ ನಾಗರಬೆಂಚಿ ಹಾಗೂ ಇತರರು ಉಪಸ್ಥಿತರಿದ್ದರು.
ಐಎಎಸ್ ಪ್ರೋಬೇಷನರಿ ಹಾಗೂ ತಹಸೀಲ್ದಾರರಾದ ಪುರುರಾಜ್ ಸಿಂಗ್ ಸೋಲಂಕಿ ಅವರು ಸ್ವಾಗತಿಸಿದರು. ಶಿರಸ್ತೇದಾರ ಸೂಗುರೇಶ ದೇಸಾಯಿ ನಿರೂಪಿಸಿದರು. ತರಬೇತಿಯಲ್ಲಿ ಸಿಂಧನೂರ, ಮಾನವಿ, ಮಸ್ಕಿ, ಲಿಂಗಸಗೂರು, ದೇವದುರ್ಗ ಹಾಗೂ ಅರಕೇರಾ ತಹಸೀಲ್ದಾರರು, ದೇವದುರ್ಗ, ಮುದಗಲ್, ಲಿಂಗಸೂರ, ಮಾನವಿ ಮತ್ತು ಮಸ್ಕಿ ಪುರಸಭೆಗಳ ಮತ್ತು ತುರವಿಹಾಳ, ಹಟ್ಟಿ, ಬಳಗಾನೂರ, ಸಿರವಾರ, ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ತಾಂತ್ರಿಕ ಸಹಾಯಕರು ಭಾಗಿಯಾಗಿದ್ದರು

Leave a Reply

Your email address will not be published. Required fields are marked *