ಕವಿತಾಳ : ಪಟ್ಟಣದ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿರುವ ತ್ರಯಂಬಕೇಶ್ವರ ದೇವಸ್ಥಾನದ ನೂತನ ಟ್ರಸ್ಟಿ ಅಧ್ಯಕ್ಷರಾಗಿ ಗಂಗಪ್ಪ ದಿನ್ನಿ ಅವರು ಆಯ್ಕೆಯಾಗಿರುವುದು ಭಕ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಈ ಹಿನ್ನೆಲೆ ಪಟ್ಟಣದ ಎಲ್ಲಾ ಸಮುದಾಯದ ಮುಖಂಡರು, ಧಾರ್ಮಿಕ ನಾಯಕರು ಹಾಗೂ ನಾಗರಿಕರು ಒಟ್ಟಾಗಿ ಭವ್ಯ ಸನ್ಮಾನ ಸಮಾರಂಭವನ್ನು ಆಯೋಜಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ, ಹೂಮಾಲೆ ಹಾಕಿ, ಶಾಲು ಹೊದಿಸಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದನಾ ಮಾತುಗಳ ಮೂಲಕ ಗಂಗಪ್ಪ ದಿನ್ನಿ ಅವರ ಸಾಮಾಜಿಕ ಸೇವೆ, ಸರಳತೆ ಮತ್ತು ಸಂಘಟನಾ ಕೌಶಲ್ಯವನ್ನು ಕೊಂಡಾಡಿದರು. ದೇವಸ್ಥಾನದ ಅಭಿವೃದ್ಧಿಗೆ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾತನಾಡಿದ ಗಂಗಪ್ಪ ದಿನ್ನಿ ಅವರು, ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಎಲ್ಲ ಸಮುದಾಯದವರ ಸಹಕಾರದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರು, ಯುವ ಮುಖಂಡರು, ಮಹಿಳೆಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭಾಶಯ ಕೋರಿದರು. ಸಮಾರಂಭವು ಸೌಹಾರ್ದತೆ ಮತ್ತು ಏಕತೆಯ ಸಂದೇಶ ಸಾರುವಂತಾಯಿತು.

