ರಾಜ್ಯದಲ್ಲಿರುವ 56,342 ಖಾಲಿ ಹುದ್ದೆಗಳ ಭರ್ತಿಯನ್ನು ಒಳ ಮೀಸಲಾತಿಯ ಶೇ.15ರ ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಕೈಗೊಳ್ಳಬೇಕು, ಉಪ ಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್ ಜಾರಿಗೊಳಿಸಿ, ಕಾನೂನಿನ ಕ್ರಮದ ಸಮರ್ಥನೆಗಳೊಂದಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒಳ ಮೀಸಲಾತಿ ಐಕ್ಯತಾ ಹೋರಾಟ ಸಮಿತಿ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟಿಸಿ ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ. ಆದರೆ ಫೆ.26ರ ಸಚಿವ ಸಂಪುಟದ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದಂತೆ ಶೇ.15ರ ಪರಿಶಿಷ್ಟ ಜಾತಿ ಮತ್ತು ಶೇ.3 ಪರಿಶಿಷ್ಟ ಪಂಗಡ ಮೀಸಲಾತಿ ಹಾಗೂ ರೋಸ್ಟರ್ ಮಾರ್ಗಸೂಚಿಗಳಂತೆ ನೇಮಕಾತಿಯ ಪ್ರಕ್ರಿಯೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಆದರೆ 2025ರ ಸೆಪ್ಟೆಂಬರ್ 3ರ ಆದೇಶಗಳನ್ನು ಅಳವಡಿಸದೆ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯದ ಧೀರ್ಘ 35 ವರ್ಷಗಳ ಹೋರಾಟಕ್ಕೆ ಮಾಡಿದ ಗಂಭೀರ ಅನ್ಯಾಯ ಹಾಗೂ ನಂಬಿಕೆಯ ದ್ರೋಹವಾಗಿದೆ. ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ,ಬಿ,ಮತ್ತು ಸಿ, ವರ್ಗೀಕರಣದಂತೆ ಒಳ ಮೀಸಲಾತಿ ಉಪವರ್ಗೀಕರಣ ಜಾರಿಗೊಳಿಸಬೇಕು.

ಅಲೆಮಾರಿ ಸಮುದಾಯಕ್ಕೆ ನೀಡಿದ ಶೇ.1ರ ಒಳ ಮೀಸಲಾತಿಯನ್ನು ಅವರಿಗೆ ಪ್ರತ್ಯೇಕವಾಗಿ ನೀಡಬೇಕು ಇಲ್ಲವೇ ‘ಎ’ ಕೆಟಗರಿಗೆ ಸಂಬಂಧಿಸಿದ ಮಾದಿಗ ಸಂಬಂಧಿತ ಜಾತಿಗಳಿಗೆ ಸೇರಿಸಬೇಕು ಎಂಬ ಹಕ್ಕೋತ್ತಾಯಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮಾದಿಗ  ಸಮುದಾಯವು  ರಾಜ್ಯದಾದ್ಯಂತ ತನ್ನ ಹಕ್ಕುಗಳ ರಕ್ಷಣೆಗೆ ರಸ್ತೆಗಿಳಿದು ತೀವ್ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ: ಹಸೇನಪ್ಪ ಸೂಲಂಗಿ, ವೀರೇಶ ಉಪ್ಪಲದೊಡ್ಡಿ, ಮೌನೇಶ ಜಾಲವಾಡಗಿ, ದುರುಗೇಶ ಕಲ್ಮಂಗಿ, ಪ್ರವೀಣ್ ದುಮತಿ, ಶಿವರಾಜ ಉಪ್ಪಲದೊಡ್ಡಿ ಮುದಿಯಪ್ಪ ಸಾಸಲಮರಿ, ದುರುಗೇಶ ಬಾಲಿ, ಹಾಗೂ ಮಂಜುನಾಥ ಗೊರೇಬಾಳ, ಹನುಮಂತ ಹಂಪನಾಳ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *