ಜಾಲಹಳ್ಳಿ : ಫೆ 27ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ FID-EKYC ಕಾರ್ಯಕ್ಕೆ ಭಾರಿ ಪ್ರಮಾಣದಲ್ಲಿ ರೈತರು ಜಮಾಯಿಸಿದರು. ಆದರೆ ಸರ್ವರ್ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ರೈತರು ಬಿಸಿಲಿನಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಗತ್ಯವಿರುವ FID-EKYC ಜೋಡಣೆ ಕಾರ್ಯಕ್ಕಾಗಿ ರೈತರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದರು. ನಾಳೆ 28-02-2026 ಕೊನೆಯ ದಿನಾಂಕವಾಗಿರುವುದರಿಂದ ಆತಂಕ ಹೆಚ್ಚಾಗಿದೆ.
ತಾಲೂಕು ಕೃಷಿ ಅಧಿಕಾರಿಯಾದ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದಾಗ “ಎಲ್ಲಾ ಕಡೆ ಇದೇ ಸಮಸ್ಯೆ ಇದೆ ಸರ್, ಸಾಯಂಕಾಲ ಅಥವಾ ರಾತ್ರಿ ಮಾಡಿಕೊಳ್ಳಿ” ಎಂದು ಉತ್ತರ ನೀಡಲಾಗಿದೆ ಎನ್ನಲಾಗಿದೆ. ಆದರೆ ಸಾಯಂಕಾಲ ಅಥವಾ ರಾತ್ರಿ ವೇಳೆ ಅಧಿಕಾರಿಗಳು ಲಭ್ಯರಾಗುತ್ತಾರೆಯೇ ಎಂಬುದು ರೈತರ ಪ್ರಶ್ನೆಯಾಗಿದೆ.
ರೈತ ಮುಖಂಡ ಮುದರಂಗಪ್ಪ ವಠಾರ ಮಾತನಾಡಿ, ಸರ್ವರ್ ಸಮಸ್ಯೆಯಿಂದ ರೈತರಿಗೆ ತೊಂದರೆ ಉಂಟಾಗಿರುವುದರಿಂದ ದಿನಾಂಕವನ್ನು ಮುಂದೂಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ರೈತರಾದ ಭೀಮಣ್ಣ ಗುಮ್ಮಿದಾರ್ ಅವರು ತಾಲೂಕು ಕೃಷಿ ಅಧಿಕಾರಿಗಳ ನಡೆ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಂಗಣ್ಣ ಕೋಲ್ಕಾರ್ ಮಾತನಾಡಿ, ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದರೂ, ಅವು ಸರಿಯಾಗಿ ಜಾರಿಯಾಗಲು ಅಧಿಕಾರಿಗಳ ಸ್ಪಂದನೆ ಅಗತ್ಯವಿದೆ ಎಂದು ಹೇಳಿದರು. FID-EKYC ಪ್ರಕ್ರಿಯೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಹಾಯಕವಾಗಿರುವುದರಿಂದ, ಕೊನೆಯ ದಿನಾಂಕವನ್ನು ಕನಿಷ್ಠ ಒಂದು ತಿಂಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಅಮರೇಗೌಡ ಕಮಲದಿನ್ನಿ, ಭೀಮಣ್ಣ ಗುಮ್ಮಿದಾರ್, ಮುದರಂಗಪ್ಪ ವಠಾರ, ಸಂಜೀವಪ್ಪ ಹೊಸೂರು, ಲಿಂಗಣ್ಣ ನಾಯಕ ಮಕಾಸಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಾಜರಿದ್ದರು.
ಸ್ಥಳ: ಜಾಲಹಳ್ಳಿ
ದಿನಾಂಕ: 27-02-2026
ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ


