ಮಾನ್ವಿ : ತಾಲೂಕಿನ ಚಿಕಲಪರ್ವಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ. (ಮೈಕೋ) ಯೋಜನೆಯಡಿ ನಿರ್ಮಿಸಲಾದ ಆರೋಗ್ಯ ಉಪಕೇಂದ್ರ ಮತ್ತು ಆರೋಗ್ಯ & ಕ್ಷೇಮ ಕೇಂದ್ರ ಕಾರ್ಯನಿರ್ವಹಿಸದೇ ಪಾಳು ಬಿದ್ದಿರುವ ಹಿನ್ನೆಲೆಯಲ್ಲಿ ದಲಿತ ಸೇನೆಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಚಿಕಲಪರ್ವಿ ಅವರು ಮಾನ್ವಿ ತಹಶೀಲ್ದಾರರ ಕಚೇರಿಯಲ್ಲಿ ಗ್ರೇಡ್–2 ತಹಶೀಲ್ದಾರರಾದ ಅಬ್ದುಲ್ ವಾಹಿದ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಹಾಗೂ ಸುರಕ್ಷಿತ ಹೆರಿಗೆ ನೀಡುವ ಉದ್ದೇಶದಿಂದ ನಿರ್ಮಿಸಲಾದ ಆರೋಗ್ಯ ಕೇಂದ್ರ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಿ ನಿರ್ಲಕ್ಷ್ಯಕ್ಕೊಳಗಾಗಿದೆ. ಇದರಿಂದ ಕಟ್ಟಡ ಪಾಳು ಬಿದ್ದಿದ್ದು, ಸ್ಥಳೀಯರು ಮಲಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿದ್ದು, ಆಸ್ಪತ್ರೆಯಲ್ಲಿದ್ದ ಕೆಲವು ಪರಿಕರಗಳು, ವಿದ್ಯುತ್ ಮತ್ತು ಸೋಲಾರ್ ಸಾಮಾಗ್ರಿಗಳು ಕಳುವಾಗಿರುವುದು ವಿಷಾದನೀಯ ಎಂದು ಹೇಳಿದರು.
ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸದ ಕಾರಣ ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಸ್ಥಳೀಯ ರೋಗಿಗಳು ಸಮೀಪದಲ್ಲೇ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆರೋಗ್ಯ ಉಪಕೇಂದ್ರ ಮತ್ತು ಆರೋಗ್ಯ & ಕ್ಷೇಮ ಕೇಂದ್ರವನ್ನು ಮರುಪ್ರಾರಂಭಿಸಿ ಕಟ್ಟಡದ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ತಹಶೀಲ್ದಾರರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *