ಅರಕೇರಾ : ಪಟ್ಟಣದ ಶ್ರೀ ಸೂಗೂರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಸಾನಿಧ್ಯತೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ಉತ್ಸವ ಜರುಗಿತು.
ದೇವಸ್ಥಾನದಲ್ಲಿ ಗಣಾರಾಧನೆ, ಎಲೆ ಪೂಜೆ ಸೇರಿದಂತೆ ಭಕ್ತರು ಜ್ಯೋತಿ ಹೊರುವ ಕಾರ್ಯಕ್ರಮಗಳು ನಡೆದವು. ಪುರವಂತರ ವಡವು-ವಚನಗಳು ಹಾಗೂ ನಂದಿಕೋಲು ಸೇವೆ ಮಾಡುವುದರ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಸ್ಥಾನದ ಕಳಸಗಳ ಹಾಗೂ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ರಾತ್ರಿ 8.30ರ ವೇಳೆಗೆ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಬಸವಣ್ಣನ ಪಾದದ ಕಟ್ಟೆಯವರೆಗೆ ಉತ್ಸವ ಜರುಗಿತು. ವಾದ್ಯ ಮೇಳಗಳೊಂದಿಗೆ ಭಾಗವಹಿಸಿದ ಮಹಿಳೆಯರು ಕಳಸಗಳನ್ನು ಹಿಡಿದು ಉತ್ಸವಕ್ಕೆ ಮೆರಗು ತಂದರು.
ನ.26 ಬುಧವಾರ ಮಹಾರಥೋತ್ಸವ ದಿನದಂದು ಬೆಳಗ್ಗೆ 6 ರಿಂದ 11 ಗಂಟೆಯವರೆಗೆ ದೇವಸ್ಥಾನದ ಸುತ್ತ ಕಳಸದ ಮೆರವಣಿಗೆ ಹಾಗೂ ಪಲ್ಲಕ್ಕಿ ಸೇವೆ ನೆರವೇರಿತು. ಪುರವಂತರು ವಡವು-ವಚನಗಳು ಭಕ್ತರ ಗಮನಸೆಳೆದವು. ಯುವಕರು ನಂದಿಕೋಲು ಕುಣಿಯುವಾಗ ಹಾಕುವ ಹೆಜ್ಜೆಗಳಿಗೆ ಘೋಷಗಳು ಮೊಳಗಿದವು. ದೇವಸ್ಥಾನದಲ್ಲಿ ಕೆಲ ಭಕ್ತರು ಪುರವಂತರಿಂದ ಶಸ್ತ್ರಗಳನ್ನು ಹಾಕಿಸಿಕೊಳ್ಳುವುದರ ಮೂಲಕ ಭಕ್ತಿ ಮೆರೆದರು. ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿಸಿ, ಕಳಸಾರೋಹಣ ನೆರವೇರಿಸಲಾಯಿತು. ಬಳಿಕ ಸಲಾಂ ಹೇಳುವ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಸುತ್ತಲೂ ಭಕ್ತರು ಪ್ರದಕ್ಷಿಣೆ ಹಾಕಿದರು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು

