ಸಿಂಧನೂರು : ವಿದ್ಯಾರ್ಥಿಗಳಲ್ಲಿ ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ‘ಕರ್ನಾಟಕ ದರ್ಶನ’ ಕಾರ್ಯಕ್ರಮಕ್ಕೆ ಸಿಂಧನೂರಿನಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ರಾಜ್ಯ ಸರ್ಕಾರದ ಈ ವಿಶಿಷ್ಟ ಯೋಜನೆಯಡಿ ಸಿಂಧನೂರಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ಸಂದರ್ಶಿಸುವ ಸುವರ್ಣ ಅವಕಾಶ ಲಭಿಸಿದೆ. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ನೇರ ವೀಕ್ಷಣೆಯ ಮೂಲಕ ವಿದ್ಯಾರ್ಥಿಗಳು ನಮ್ಮ ನಾಡಿನ ವೈವಿಧ್ಯತೆಯನ್ನು ಅರಿಯಲು ಇದು ಸಹಕಾರಿಯಾಗಿದೆ. ಇದು ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡಲಿದೆ.
ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಸಾಹೇಬರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಈ ಪ್ರವಾಸಕ್ಕೆ, ಅವರ ಅನುಪಸ್ಥಿತಿಯಲ್ಲಿ ಮೊಮ್ಮಗ ಹಾಗೂ ಯುವ ಮುಖಂಡರಾದ ಬಸನಗೌಡ ಬಾದರ್ಲಿ ವಕೀಲರು ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಬಾದರ್ಲಿಯವರು, “ವಿದ್ಯಾರ್ಥಿ ಜೀವನದಲ್ಲಿ ಪ್ರವಾಸಗಳು ಜ್ಞಾನದ ವಿಸ್ತರಣೆಗೆ ಪೂರಕವಾಗಿರುತ್ತವೆ. ನಮ್ಮ ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ನೋಡಿ ಕಲಿಯುವ ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *