ರಾಯಚೂರು ಫೆಬ್ರವರಿ 25 (ಕರ್ನಾಟಕ ವಾರ್ತೆ): ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆ ಮಾಡುವದನ್ನು ಕಡಿಮೆ ಮಾಡಿ ನಿಮ್ಮ ಸಮಯವನ್ನು ಓದುವದರ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ರಾಯಚೂರು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ಸಲಹೆ ನೀಡಿದ್ದಾರೆ.
ಹತ್ತನೇ ತರಗತಿಯು ವಿದ್ಯಾರ್ಥಿಯ ಜೀವನದ ಒಂದು ಪ್ರಮುಖ ಘಟ್ಟ. ಈ ಸಮಯದಲ್ಲಿ ಮಗುವಿನ ಮೇಲೆ ಕೇವಲ ಶಿಕ್ಷಕರ ಜವಾಬ್ದಾರಿಯಷ್ಟೇ ಅಲ್ಲ. ಪೋಷಕರಾದ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ಅತಿ ಮುಖ್ಯವಾಗಿದೆ.
ನಮ್ಮ ರಾಯಚೂರು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ನಿಮ್ಮ ಮಗುವಿನ ಪಾತ್ರ ದೊಡ್ಡದಿದೆ. ಈ ಪರೀಕ್ಷಾ ಸಂದರ್ಭದಲ್ಲಿ ನಿಮ್ಮ ಮಗುವಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕಾಗಿದೆ.
ಪರೀಕ್ಷೆಯು ಒಂದು ಭಯದ ವಿಷಯವಾಗಬಾರದು. ಮಗುವಿನ ಮೇಲೆ ಹೆಚ್ಚಿನ ಅಂಕಗಳ ಒತ್ತಡ ಹೇರಬೇಡಿ. ಬದಲಿಗೆ. ನೀನು ನಿನ್ನ ಅತ್ಯುತ್ತಮ ಪ್ರಯತ್ನ ಮಾಡು, ನಾವು ನಿನ್ನ ಜೊತೆಗಿದ್ದೇವೆ ಎಂಬ ಭರವಸೆಯನ್ನು ನೀಡಬೇಕು.
ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಸಬೇಕು. ಮಗು ಓದುತ್ತಿರುವಾಗ ಟಿವಿ ಅಥವಾ ಮೊಬೈಲ್‌ಗಳ ಬಳಕೆಯನ್ನು ಕಡಿಮೆ ಮಾಡಬೇಕು. ಏಕಾಗ್ರತೆಯಿಂದ ಓದಲು ಬೇಕಾದ ಸ್ಥಳಾವಕಾಶ ಮಾಡಿಕೊಡಬೇಕು.
ಪರೀಕ್ಷೆಯ ಸಮಯದಲ್ಲಿ ಮಗುವಿಗೆ ಪೌಷ್ಟಿಕ ಆಹಾರ ಮತ್ತು ಸಾಕಷ್ಟು ಕುಡಿಯುವ ನೀರನ್ನು ನೀಡಿ. ಮಗು ಕನಿಷ್ಠ 6-7 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿದ್ರೆ ಕಡಿಮೆಯಾದರೆ ಮರೆವು ಉಂಟಾಗುವ ಸಾಧ್ಯತೆ ಇರುತ್ತದೆ.
ಮಗು ನಿಗದಿತ ಸಮಯದಲ್ಲಿ ಓದುವಂತೆ ಮತ್ತು ನಡುವೆ ಅಲ್ಪ ವಿರಾಮ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ನಿರಂತರವಾಗಿ ಓದುವುದಕ್ಕಿಂತ, ಅರ್ಥ ಮಾಡಿಕೊಂಡು ಓದುವುದು ಹೆಚ್ಚು ಫಲಪ್ರದ.
ಇಂದಿನ ದಿನಗಳಲ್ಲಿ ಮೊಬೈಲ್ ಮತ್ತು ಟಿವಿಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ದೊಡ್ಡ ಅಡ್ಡಿಯಾಗಿವೆ. ಆದ್ದರಿಂದ ಪರೀಕ್ಷೆಯ ಮುಗಿಯುವವರೆಗೂ ಮಗುವಿಗೆ ಮೊಬೈಲ್ ಫೋನ್ ಬಳಸಲು ಅವಕಾಶ ನೀಡಬೇಡಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಶೈಕ್ಷಣಿಕ ಕಾರಣಗಳಿಗಾಗಿ ನಿಮ್ಮ ಮೇಲ್ವಿಚಾರಣೆಯಲ್ಲಿ ಬಳಸಿ.
ಮನೆಯಲ್ಲಿ ಟಿವಿ ನೋಡುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ನಿಮ್ಮ ಮಗು ಓದುತ್ತಿರುವಾಗ ಮನೆಯ ಇತರ ಸದಸ್ಯರು ಟಿವಿ ನೋಡುವುದರಿಂದ ಮಗುವಿನ ಗಮನ ಬೇರೆಡೆಗೆ ಸರಿಯುತ್ತದೆ.
ಸಾಮಾಜಿಕ ಜಾಲತಾಣಗಳಿಂದ (ವ್ಯಾಟ್ಸ್ ಆಪ್, ಇನ್ಸ್ಟ್, ಯೂಟ್ಯೂಬ್) ಮಗುವನ್ನು ದೂರವಿರಿಸಿ, ಪಠ್ಯಪುಸ್ತಕಗಳತ್ತ ಗಮನ ಹರಿಸುವಂತೆ ಪ್ರೇರೇಪಿಸಿ.
ನೆನಪಿಡಿ ಪ್ರತಿ ಮಗುವಿನಲ್ಲೂ ಒಂದು ವಿಶೇಷ ಪ್ರತಿಭೆಯಿರುತ್ತದೆ. ಅಂಕಗಳು ಮಾತ್ರ ಜೀವನವಲ್ಲ, ಆದರೆ ಶ್ರದ್ಧೆಯಿಂದ ಕೆಲಸ ಮಾಡುವ ಗುಣ ಜೀವನದ ಉದ್ದಕ್ಕೂ ನೆರವಾಗುತ್ತದೆ. ನಮ್ಮ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಉತ್ತಮ ಯಶಸ್ಸು ಸಾಧಿಸಲಿ ಎಂಬುದು ನನ್ನ ಆಶಯವಾಗಿದೆ. ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಶುಭಹಾರೈಕೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *