ರಾಯಚೂರು ಫೆಬ್ರವರಿ 24 (ಕರ್ನಾಟಕ ವಾರ್ತೆ): ರಾಜ್ಯ ಭೋವಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಕಳುಹಿಸುವಂತೆ ರಾಜ್ಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳಿಗೆ ತಾವು ಪತ್ರ ಬರೆದು ಮನವಿ ಮಾಡಲಾಗಿದೆ. ಫಲಾನುಭವಿಗಳ ಅಂತಿಮ ಆಯ್ಕೆಪಟ್ಟಿ ಪಡೆದು, ನಿಗಮದಲ್ಲಿ ಲಭ್ಯವಿರುವ ಅನುದಾನವನ್ನು ಕಾಲಮಿತಿಯೊಳಗೆ ಬಳಸಲು ಕ್ರಮವಹಿಸುವಂತೆ ನಿಗಮದ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅವರು ಹೇಳಿದರು.
ಫೆ.24ರ ಮಂಗಳವಾರ ದಂದು ನಗರದ ಕೃಷಿ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪ್ರತಿ ವರ್ಷ ಆಯವ್ಯಯ ಹಾಗೂ ವಿವಿಧ ಯೋಜನೆಗಳಡಿ ಸರ್ಕಾರದಿಂದ ಅನುದಾನ ನಿಗದಿಪಡಿಸಲಾಗುತ್ತಿದ್ದು 2025-26ನೇ ಸಾಲಿಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರೂ.93.75 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನದ ಪೈಕಿ ಈಗಾಗಲೇ ಬಿಡುಗಡೆಯಾದ 68.81 ಕೋಟಿ ರೂ. ಅನುದಾನವು ಸಂಪೂರ್ಣ ಬಳಕೆಯಾಗಿದೆ ಎಂದು ಅವರು ಹೇಳಿದರು.
ರಾಜ್ಯ, ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ದಿನಾಂಕ:26-05-2015ರ ಸಭೆಯಲ್ಲಿ ನೀಡಿದ ಅನುಮೋದನೆಯಂತೆ ಹಾಗೂ ಸರ್ಕಾರದ ಆದೇಶ ದಿನಾಂಕ:29-02-2016 ರಂತೆ ಕರ್ನಾಟಕದಲ್ಲಿ ವಾಸಿಸುತ್ತಿರುವ ಭೋವಿ ಜನಾಂಗದ ಜನರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ 2013 ರ ಸೆಕ್ಷನ್ 8 ರನ್ನಯ ನೋಂದಣಿ ಮಾಡಲಾಗಿದೆ. ಪರಿಶಿಷ್ಟ ಜಾತಿಯಲ್ಲಿ ಬರುವ 101 ಉಪ ಜಾತಿಗಳ ಇತ್ತೀಚಿನ ಅಧಿಸೂಚನೆ ಆಧಾರದ ಮೇಲೆ ಬೋವಿ ಜಾತಿಯು ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ, ಪ್ರಾದೇಶಿಕ ಭಾಷೆಗಳು, ಹಬ್ಬಗಳ ಆಚರಣೆಗಳು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಆಧರಿಸಿ ಪರಿಶಿಷ್ಟ ಜಾತಿಯ 09 ಜಾತಿ/ಉಪಜಾತಿಗಳಾದ ಭೋವಿ, ಒಡ್, ಒಡ್ಡ, ಒಡ್ಡರ್, ವಡ್ಡರ, ಕಲ್ಲು ಒಡ್ಡರ, ಭೋವಿ (ನಾನ್ ಬೆಸ್ತ್) ಹಾಗೂ ಮಣ್ಣು ವಡ್ಡರ ಈ ಜಾತಿಗಳಿಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯವನ್ನು ಪಡೆಯಲು ಗುರುತಿಸಲಾಗಿದೆ.
ಸರ್ಕಾರದ ಆದೇಶದಂತೆ ಭೋವಿ ಜನಸಂಖ್ಯೆ ಹೆಚ್ಚಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕಲಬುರಗಿ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಭೋವಿ ನಿಗಮದ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ಕಚೇರಿಯನ್ನು ತೆರೆಯಲು ಆದೇಶಿಸಲಾಗಿರುತ್ತದೆ. ಪ್ರಸ್ತುತ ಬೆಂಗಳೂರು ನಗರ, ಕೋಲಾರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಕಚೇರಿಯನ್ನು ತೆರೆದು ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ನನಗೆ ನಿಗಮದ ರಾಜ್ಯಾಧ್ಯಕ್ಷನನ್ನಾಗಿ ನೇಮಿಸಿ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ನಿಗಮದ ಯೋಜನೆಗಳ ಬಗ್ಗೆ ಭೋವಿ ಸಮುದಾಯದ ಜನತೆಗೆ ತಿಳಿ ಹೇಳಲು ಹೇಳಿದ್ದರಿಂದ ಜನಜಾಗೃತಿಗಾಗಿ ತಾವು ಅಧ್ಯಕ್ಷರಾಗಿ ಜಿಲ್ಲಾವಾರು ಪ್ರವಾಸ ಕೈಗೊಂಡಿದ್ದು, ಪ್ರಥಮ ಬಾರಿಗೆ ರಾಯಚೂರು ಜಿಲ್ಲೆಗೆ ಆಗಮಿಸಿದ್ದಾಗಿ ಅವರು ಹೇಳಿದರು. ರಾಯಚೂರು, ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ, ಬಾಗಲಕೋಟೆ ಭಾಗದಿಂದ ಜನತೆ ಬೆಂಗಳೂರಿಗೆ ಅಲೆಯುವುದು ಬೇಡ, ನಾನೇ ಅವರಿದ್ದಲ್ಲಿಗೆ ಹೋಗಬೇಕು ಎಂದು ತಿಳಿದು ತಾವು ಪ್ರವಾಸ ಕೈಗೊಂಡಿದ್ದಾಗಿ ಅವರು ಹೇಳಿದರು.
ಯಾವುದೇ ಕಾರಣಕ್ಕೂ ಮಕ್ಕಳಿಗೆ ಶಿಕ್ಷಣ ಕೊಡಿಸುವದನ್ನು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಿಗೆ ತಿಳಿಸುತ್ತಿದ್ದೇನೆ. ಶಿಕ್ಷಣದ ಮಹತ್ವವನ್ನು ಅವರಿಗೆ ಮನವರಿಕೆ ಮಾಡುತ್ತಿದ್ದೇನೆ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ವಸತಿ ಸೌಕರ್ಯ ಕಲ್ಪಿಸಿದೆ ಎಂದು ಸಮಾಜದ ಜನರಿಗೆ ತಿಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ನಾರಾಯಣಸ್ವಾಮಿ, ಯಲ್ಲಪ್ಪ, ನರಸಪ್ಪ, ಶಶಿಕಲಾ ಭೀಮರಾಯ, ಯಲ್ಲಪ್ಪ, ಲಕ್ಷ್ಮಣ, ಆಂಜನೇಯ ಗಾಣಧಾಳ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರವಿ, ಸೇರಿದಂತೆ ಇತರರು ಇದ್ದರು.


