ಮಸ್ಕಿ: ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಲಿಂಗಸುಗೂರು ಮುಖ್ಯ ರಸ್ತೆ ಬಳಿಯಲ್ಲಿರುವ ಸರ್ವೆ ನಂ: ೩೨ ರಲ್ಲಿ ೬ ಎಕರೆ ಜಮೀನು ಖರಿದಿಸಿ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ತಿರ್ಮಾನಿಸಿದ್ದು, ಪುನಃ ಸರ್ವೆ ಮಾಡಿ ನಿವೇಶನ, ಮನೆಯಿಲ್ಲದ ಫಲಾನುಭವಿಗಳಿಗೆ ಮಂಜೂರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಮನವಿ ಪತ್ರ ಸಲ್ಲಿಸುವ ಮೂಲಕ ಮಂಗಳವಾರ ಒತ್ತಾಯಿಸಿದರು.
ನಂತರ ದುರಗರಾಜ್ ವಟಗಲ್ ಮಾತನಾಡಿ, ಮಸ್ಕಿ ಗ್ರಾಮ ಪಂಚಾಯತಿ ಸಂದರ್ಭದಲ್ಲಿ ನವಗ್ರಾಮ (ಆಶ್ರಯ) ವಸತಿ ಯೋಜನೆಯಡಿಯಲ್ಲಿ ಹಕ್ಕುಪತ್ರ ವಿತರಣೆಗಾಗಿ ಸುಮಾರು ೧೮-೧೯ ವರ್ಷದ ಹಿಂದೆ ಸರ್ವೆ ನಂ: ೩೨ ರಲ್ಲಿ ೬ ಎಕರೆ ಜಮೀನು ಖರೀದಿಸಿ ಹಕ್ಕು ಪತ್ರಗಳನ್ನು ಕೆಲವು ಪಲಾನುಭವಿಗಳಿಗೆ ವಿತರಿಸಿ ಮನೆಗಳನ್ನು ನಿರ್ಮಿಸಲಾಗಿತ್ತು. ಈ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಫಲಾನುಭವಿಗಳು ವಾಸ ಮಾಡದೆ ಇದ್ದುದ್ದರಿಂದ ಕಟ್ಟಡವು ಪಾಳು ಬಿದ್ದಿದ್ದವು. ಇತ್ತೀಚೆಗೆ ಶಾಸಕರು ಮತ್ತು ಪುರಸಭೆಯ ಆಡಳಿತ ಮಂಡಳಿ ಈ ಮನೆಗಳನ್ನು ತೆರೆವುಗೊಳಿಸಿ ಮತ್ತೊಮ್ಮೆ ನಿವೇಶನಗಳನ್ನು ಗುರುತಿಸಿ ಹದ್ದುಬಸ್ತು ಮಾಡಿ ಮೂಲಭೂತ ಸವಲತ್ತುಗಳನ್ನು ಒದಗಿಸಿ ಪಲಾನುಭವಿಗಳಿಗೆ ೨೩೬ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಿದ್ದತೆ ನಡೆಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಗಳು ೧೭೫ ಜನ ನವ ಗ್ರಾಮದ ಫಲಾನುಭವಿಗಳೆಂದು ಮಾಹಿತಿ ನೀಡಿದ್ದಾರೆ. ೧೭೫ ಫಲಾನುಭವಿಗಳ ಪೈಕಿ ಈಗಾಗಲೇ ಶೇ.೫೦ ರಷ್ಟು ಫಲಾನುಭವಿಗಳು ಮರಣ ಹೊಂದಿದ್ದಾರೆ. ಇನ್ನೂಳಿದ ಶೇ ೫೦ರ ಪೈಕಿ ಶೇ.೩೦ ರಷ್ಟು ಶ್ರೀಮಂತರ ವರ್ಗಕ್ಕೆ ಸೇರಿದ ಫಲಾನುಭವಿಗಳಾಗಿದ್ದು, ಈ ಹಿಂದೆ ಆಯ್ಕೆ ಮಾಡಿದ ಫಲಾನುಭವಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹೊಸದಾಗಿ ಆರ್ಥಿಕವಾಗಿ ದುರ್ಬಲರಾದ ಫಲಾನುಭವಿಗಳು ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಪ್ರಕಟಣೆ ಹೊರಡಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಹೊಸದಾಗಿ ಅರ್ಜಿಗಳನ್ನು ಕರೆಯದೇ ಈ ಹಿಂದಿನ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರೆ ಸಂಘಟನೆಯಿಂದ ಪುರಸಭೆ ಕಾರ್ಯಲಯ ಅನಿರ್ಧಿಷ್ಟಾವಧಿ ಧರಣಿ ಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೂರ್ ಆಹ್ಮದ್, ಸುರೇಶ ಕಾಟಗಲ್, ಮೌನೇಶ, ಮುದಿಯಪ್ಪ, ಅಯ್ಯಪ್ಪ, ಬಸವರಾಜ, ಅಭಿಷೇಕ್ ಸೇರಿದಂತೆ ಇನ್ನಿತರರಿದ್ದರು.

