ರಾಯಚೂರು (ಕರ್ನಾಟಕ ವಾರ್ತೆ): ರೈಲ್ವೆ ಲೈನ್ ನಿರ್ಮಾಣ ಯೋಜನೆ, ಇಂಡಿಯಾ ಪೋಸ್ಟ್, ಬಿಎಸ್‌ಎನ್‌ಎಲ್, ಸರ್ವ ಶಿಕ್ಷಣ ಶಿಕ್ಷಣ ಅಭಿಯಾನ, ಸ್ವಚ್ಛ ಭಾರತ ಮಿಷನ್, ಜಲಜೀವನ ಮಿಷನ್, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಸೇರಿದಂತೆ ವಿವಿಧ ಕೇಂದ್ರ ಪುರಷ್ಕೃತ ಯೋಜನೆಗಳ ಪ್ರಗತಿಗೆ ವೇಗ ನೀಡಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಜಿ. ಕುಮಾರ ನಾಯಕ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಫೆ.21ರಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲಿಗೆ ಕೃಷಿ ಇಲಾಖೆಯ ಯೋಜನೆಗಳ ಪ್ರಗತಿಯ ಬಗ್ಗೆ ಸಂಸದರು ಕೇಳಿದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರಿನಲ್ಲಿ 12,477 ರೈತರು ಮತ್ತು ಹಿಂಗಾರಿನಲ್ಲಿ 6909 ರೈತರು ನೋಂದಣಿ ಮಾಡಿದ್ದಾರೆ. ವಿಮಾ ಸಂಸ್ಥೆಯಿಂದ ಬೆಳೆವಿಮೆ ಪರಿಹಾರ ಇತ್ಯರ್ಥಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 2,34,988 ರೈತರಿಗೆ 736.14 ಕೋಟಿ ರೂ. ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ನೆರವು ನೀಡಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ರಾಯಚೂರು ಫಲವತ್ತಾದ ಮಣ್ಣು ಹೊಂದಿದ ಜಿಲ್ಲೆಯಾಗಿದ್ದು, ರೈತರಿಗೆ ನ್ಯಾಯ ಸಿಗುವ ದಿಶೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಂಸದರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಆಯ್ಕೆ ಮಾಡಲಾಗಿರುತ್ತದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ವಿವರಿಸಿದರು.
ರಾಯಚೂರು ಜಿಲ್ಲೆಯಲ್ಲಿ ರೈಲ್ವಿ ಲೈನ್ ನಿರ್ಮಾಣ ಯೋಜನೆಯ ಪ್ರಗತಿಯ ಬಗ್ಗೆ ಸಂಸದರು ಕೇಳಿದರು. ಮುನಿರಾಬಾದ್-ಮೆಹಬೂಬನಗರ ರೈಲ್ವೆ ಲೈನ್ ನಿರ್ಮಾಣದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಿಂಧನೂರ, ರಾಯಚೂರು, ಮಾನವಿ, ಸಿರವಾರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ನಡೆದ ಭೂಸ್ವಾಧೀನ ಪ್ರದೇಶದ ವಿಸ್ತೀರ್ಣವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೆಲವು ಕಡೆಗಳಲ್ಲಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದು ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮ ವಹಿಸಲಾಗುತ್ತದೆ. ಗದಗ-ವಾಡಿ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ರಾಯಚೂರು ತಾಲೂಕಿನ ಕುರುಬದೊಡ್ಡಿ, ಚಂದ್ರ ಬಂಡ, ಸಿಂಗನೋಡಿ ಗ್ರಾಮಗಳಲ್ಲಿ ಹೊಸದಾಗಿ ಕೈಗಾರಿಕಾ ಪ್ರದೇಶ ಮತ್ತು ಸೌರ ವಿದ್ಯುತ್ ಸ್ಥಾಪನೆಗಾಗಿ ಭೂಸ್ವಾಧಿನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬೆಂಗಳೂರು, ಕಲಬುರಗಿ, ಸೊಲ್ಲಪುರ ಸೇರಿದಂತೆ ಪ್ರಮುಖ ವಾಣಿಜ್ಯ ನಗರಗಳ ಮೂಲಕ ದಕ್ಷಿಣದ ಚೆನೈದಿಂದ ಉತ್ತರದ ಹೊಸದಿಲ್ಲಿವರೆಗೆ ಪ್ರಮುಖ ರೈಲುಗಳು ರಾಯಚೂರು ಮಾರ್ಗವಾಗಿಯೇ ಸಂಚರಿಸುತ್ತವೆ. ಇದು ನಮ್ಮ ಭಾಗ್ಯ. ಈ ರೈಲ್ವೆ ಲೈನದಲ್ಲಿ ಪ್ರತಿ ದಿನ ಸಾಕಷ್ಟು ಗೂಡ್ಸ್ ರೈಲುಗಳು ಸಂಚರಿಸುತ್ತವೆ. ಕೃಷಿ, ತೋಟಗಾರಿಕೆ, ವಾಣಿಜ್ಯ ಉತ್ಪನ್ನಗಳ ಸರಬರಾಜಿಗೆ ಇದು ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕಾರ್ಯಗಳ ಪ್ರಗತಿಗೆ ಒತ್ತು ಕೊಡಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಒದಗಿಸುವ ರೈತರಿಗೆ ಭೂ ಪರಿಹಾರ ಪಾವತಿಯು ಕಾಲಮಿತಿಯೊಳಗೆ ಆಗಬೇಕು. ರೈತರಿಗೆ ನ್ಯಾಯ ಸಿಗುವಂತಾಗಬೇಕು. ಇದಕ್ಕೆ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು. ಸಭೆಯಲ್ಲಿ ವರದಿ ಒಪ್ಪಿಸುವುದಷ್ಟೇ ಅಧಿಕಾರಿಗಳ ಕೆಲಸವಲ್ಲ, ಕಾಳಜಿ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳಿಗೆ ಇದೆ ವೇಳೆ ಸೂಚನೆ ನೀಡಿದರು.
ಪಿಎಂಶ್ರೀ ಶಾಲೆಗಳಿಗೆ ಮಂಜೂರಾಗಿರುವ ಕಾಮಗಾರಿಗಳ ಬಗ್ಗೆ ಸಂಸದರು ಪರಿಶೀಲಿಸಿದರು. 2024-25ನೇ ಸಾಲಿಗೆ ಪಿಎಂಶ್ರೀ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕೋಟಿ ಗೂ ಹೆಚ್ಚು ಅನುದಾನ ಮಂಜೂರಾಗಿದ್ದು, ಪಿಆರ್‌ಇಡಿ, ಲೋಕೋಪಯೋಗಿ ಇಲಾಖೆಗಳಿಂದ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದೇ ರೀತಿ 2025-26ನೇ ಸಾಲಿನಲ್ಲಿ 115 ಲಕ್ಷ ರೂ ವೆಚ್ಚದಲ್ಲಿ 4 ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 2025-26ನೇ ಸಾಲಿನಲ್ಲಿ ಕೇಂದ್ರ ಅನುಮೋದನೆ ಮಂಡಳಿಯಿಂದ ಧರ್ತಿ ಅಬಾ ಜನ್ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ವಸತಿ ನಿಲಯಗಳ ನಿರ್ಮಾಣಕ್ಕೆ 23 ಕೋಟಿ ರೂ ಮಂಜೂರಾಗಿದೆ. 2025-26ನೇ ಸಾಲಿನಲ್ಲಿ ಕೆಕೆರ‍್ಡಿಬಿಯಿಂದ 35 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಸಮಗ್ರ ಶಿಕ್ಷಣ ಕರ್ನಾಟಕದಿಂದ 2023-24ನೇ ಸಾಲಿನಲ್ಲಿ ಮಂಜೂರಾದ ಪೂರ್ವ ಪ್ರಾಥಮಿಕ ತರಗತಿಗಳನ್ನು 2024-25ನೇ ಸಾಲಿನಲ್ಲಿ 4 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಕೆ.ಡಿ.ಬಡಿಗೇರ ಅವರು ಸಭೆಗೆ ಮಾಹಿತಿ ನೀಡಿದರು.
ಬಿಎಸ್‌ಎನ್‌ಎಲ್ ಯೋಜನೆಗಳ ಬಗ್ಗೆ ಸಂಸದರು ಕೇಳಿದರು. ಬಿಎಸ್‌ಎನ್‌ಎಲ್ ಅಡಿಯಲ್ಲಿ 4ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಪ್ರಸ್ತುತ 95 ಗ್ರಾಮ ಪಂಚಾಯತ್‌ಗಳಲ್ಲಿ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತಿದ್ದು, ಹಂತ ಹಂತವಾಗಿ ಎಲ್ಲಾ 191 ಗ್ರಾಮ ಪಂಚಾಯತ್‌ಗಳಿಗೆ ಇಂಟರ್‌ನೆಟ್ ಸಂಪರ್ಕ ನೀಡಲಾಗುತ್ತದೆ. ಮುಂದಿನ ಮೊಬೈಲ್ ವಿಸ್ತರಣಾ ಹಂತದಲ್ಲಿ, ಇನ್ನೂ ಮೊಬೈಲ್ ಸಂಪರ್ಕ ಅಥವಾ ಇಂಟರನೆಟ್ ಸೌಲಭ್ಯವಿಲ್ಲದ ಗ್ರಾಮಗಳಿಗೆ 4ಜಿ ಸೇವೆಗಳು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತೀವ್ರ ಅಸಮಾಧಾನ: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಫಲಾನುಭವಿಗಳಾದವರಿಗೆ ಸಾಲ ಸೌಕರ್ಯ ಮಂಜೂರಿ ಮಾಡಲು ಸಿ-ಬಿಲ್ ಸ್ಕೋರ್ ಏಕೆ ಕೇಳುತ್ತೀರಿ? ಎಂದು ಬ್ಯಾಂಕಿನ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಡು ಬಡವರು, ಮಧ್ಯಮ ವರ್ಗದ ಜನರನ್ನು ಬ್ಯಾಂಕುಗಳಿಗೆ ಅಲೆದಾಡಿಸದೇ ಸರ್ಕಾರದ ಯೋಜನೆಯ ಫಲಾನುಭವಿ ಎಂಬುದನ್ನು ಖಚಿತಪಡಿಸಿಕೊಂಡು ಸಾಲಸೌಕರ್ಯ ನೀಡಲು ಎಲ್ಲ ಬ್ಯಾಂಕಿನ ಮ್ಯಾನೇಜರಗಳಿಗೆ ಆದೇಶ ಮಾಡಬೇಕು ಎಂದು ಸಂಸದರು ಲೀಡ್ ಬ್ಯಾಂಕಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜನತೆಗೆ ನೀರು ಪೂರೈಸಿ: ಜಲಜೀವನ ಮಿಷನ್ ಯೋಜನೆ ಅನುಷ್ಠಾನದ ಚರ್ಚೆ ವೇಳೆ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಜನತೆಗೆ ನೀರು ಪೂರೈಸುವ ಕಾರ್ಯವಾಗಬೇಕು. ನೀರು ಪೂರೈಸದಿದ್ದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ ಎಂಬುದರ ಬಗ್ಗೆ ಅರಿವಿರಬೇಕು. ನಾವು ಜನರ ಭಾವನೆಗಳಿಗೆ ಸ್ಪಂದನೆ ನೀಡಬೇಕು. ಜಿಲ್ಲಾ ಪಂಚಾಯತ್ ಸಿಇಓ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ತನಿಖೆಗೆ ಒತ್ತಾಯ: ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಜಲಜೀವನ ಮಿಷನ್ ಯೋಜನೆ ಸಂಪೂರ್ಣ ಫೇಲ್ ಆಗಿದೆ. ಕಳಪೆ ಕಾಮಗಾರಿಯ ಬಗ್ಗೆ ತನಿಖೆಗೆ ಆದೇಶ ಮಾಡಬೇಕು ಎಂದು ದೇವದುರ್ಗ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ ನಾಯಕ ಅವರು ಸಭೆಯಲ್ಲಿ ಆಗ್ರಹಿಸಿದರು.
ಅಧಿಕಾರಿಗಳಿಗೆ ನಿರ್ದೇಶನ: ರಾಯಚೂರು ಜಿಲ್ಲೆಯ ಎಲ್ಲ ಗ್ರಾಮೀಣ ಜನ ವಸತಿಗಳಿಗೆ ಹಾಗೂ 7 ನಗರ ಸ್ಥಳೀಯ ಸಂಸ್ಥೆಗಳಾದ ಮಾನ್ವಿ, ಮಸ್ಕಿ, ಕವಿತಾಳ, ತುರವಿಹಾಳ, ಬಳಗಾನೂರ, ಸಿರವಾರ ಮತ್ತು ಹಟ್ಟಿಗಳಿಗೆ ಡಿಬಿಓಟಿ ಆಧಾರದ ಮೇಲೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಲಜೀವನ ಮಿಷನ್ ಯೋಜನೆಯಡಿ ನಬಾರ್ಡ ಹಾಗೂ ಯುಡಿಡಿ ಅನುದಾನ ನೆರವಿನೊಂದಿಗೆ ಸಂಯೋಜಿತಗೊಳಿಸಿ ಅನುಷ್ಠಾನಗೊಳಿಸುವ ಕಾರ್ಯವು ವೇಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಇದೆ ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾಮ ನಿರ್ದೇಶಿತ ಸದಸ್ಯರಿಂದ ಅಸಮಾಧಾನ: ಇಂಡಿಯಾ ಪೋಸ್ಟ್ ಯೋಜನೆಗಳಿಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ. ಬಹುತೇಕ ಅಂಚೇ ಕಚೇರಿಗಳು ಹಳೆಯ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಹಳ್ಳಿಗಳಲ್ಲಿ ಬಿಎಸ್‌ಎನ್‌ಎಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಕೇಂದ್ರ ಪುರಷ್ಕೃತ ಆರೋಗ್ಯ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪುತ್ತಿಲ್ಲ. ಜಲಜೀವನ ಮಿಷನ್ ಯೋಜನೆ ಸಂಪೂರ್ಣ ಕಳಪೆಯಾಗಿದೆ ಎಂದು ನಾಮ ನಿರ್ದೇಶಿತ ಸದಸ್ಯರಾದ ಹನುಮಂತ್ರಾಯ ನಾಯಕ, ತಿಪ್ಪಣ್ಣ, ರಾಘವೇಂದ್ರ, ರಜಿಯಾ ಸುಲ್ತಾನ ಅವರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



