ರಾಯಚೂರು (ಕರ್ನಾಟಕ ವಾರ್ತೆ): ಲೋಕೋಪಯೋಗಿ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಎರಡು ದಿನ ಮತ್ತು ಐದು ವರ್ಷಗಳಿಗೊಮ್ಮೆ ಏಳು ದಿನಗಳ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಸಮೀಕ್ಷಯ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂಧ್ರತೆ ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಅಗಲಳತೆ ನಿರ್ಧರಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ.
ಪ್ರಸ್ತುತ ವರ್ಷದಲ್ಲಿ ಫೆ.26ರ ಬೆಳಿಗ್ಗೆ 6 ಗಂಟೆಯಿಂದ ಫೆ.28ರ ಬೆಳಿಗ್ಗೆ 6 ಗಂಟೆಯವರೆಗೆ ಒಟ್ಟು ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಕ್ಯಾಮರ ಸಮೇತ ಸಮೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ.
ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ರಸ್ತೆ ಸಂಚಾರ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ರಸ್ತೆಗಳ ಮೇಲೆ ಕ್ಯಾಮರ ಸಮೇತ ಸಮೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಸಮೀಕ್ಷ್ಷಾ ಕೇಂದ್ರಗಳಿದ್ದಲ್ಲಿ ವಾಹನ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
