ರಾಯಚೂರು ಫೆಬ್ರವರಿ 10 (ಕರ್ನಾಟಕ ವಾರ್ತೆ): ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತವಾಗಿರುವುದರಿಂದ ಜಂತುಹುಳು ದೇಹಕ್ಕೆ ಪ್ರವೇಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಹೇಳಿದರು.

ಫೆ.10ರ ಮಂಗಳವಾರ ದಂದು ನಗರದ ಕೆ.ಇ.ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ರಾಜಮಾನಗಡ್ಡಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯಯುತವಾಗಿದ್ದಲ್ಲಿ ಸದೃಢ ಸಮಾಜ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಜಂತುಹುಳು ದೇಹಕ್ಕೆ ಪ್ರವೇಶಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾನಾ ಇಲಾಖೆಗಳು ಕೈಜೋಡಿಸಬೇಕೆಂದರು.

ರಕ್ತಹೀನತೆ ನಿಯಂತ್ರಣಕ್ಕಾಗಿ ಜಂತುಹುಳುಗಳ ನಿವಾರಣೆಗಾಗಿ ಆಲ್ಬೆಂಡೋಜೋಲ್ ಮಾತ್ರೆಗಳನ್ನು ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳಿಗೂ ತಪ್ಪದೆ ಚಿಪಿಸುವ ದಿಶೆಯಲ್ಲಿ ನಿಗಾವಹಿಸಬೇಕು ಎಂದರು.

ಜಿಲ್ಲೆಯಾದ್ಯAತ ಐದು ತಾಲೂಕಿನ 2,737 ಅಂಗನವಾಡಿ ಕೇಂದ್ರಗಳು, 2,448 ಶಾಲೆಗಳಲ್ಲಿ, ಕಾಲೇಜು, ತಾಂತ್ರಿಕ ವಿದ್ಯಾಲಯ ಸೇರಿದಂತೆ 1 ವರ್ಷದಿಂದ 19 ವರ್ಷದೊಳಗಿನ 7,33,702 ಮಕ್ಕಳಿಗೆ ಮಾತ್ರೆಗಳನ್ನು ಊಟ ಅಥವಾ ಉಪಹಾರ ಸೇವಿಸಿದ ನಂತರ ತಪ್ಪದೆ ಸೇವಿಸಲು ಆರೋಗ್ಯ ಇಲಾಖೆ ಹಾಗೂ ಮುಂಚೂಣಿ ಇಲಾಖೆಗಳಿಂದ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಮಾತ್ರೆಗಳನ್ನು ಪ್ರತಿ ಮಗುವು ಚಿಪಿಸಿ ನುಂಗಿಸಲು ಕ್ರಮವಹಿಸಿ ಮಕ್ಕಳಲ್ಲಿಯ ಜಂತುಹುಳು ನಿವಾರಣೆ ಮಾಡುವ ಮೂಲಕ ಜಿಲ್ಲೆಯ ಮಕ್ಕಳು ಆರೋಗ್ಯವಂತರಾಗಲು ಎಲ್ಲರೂ ಶ್ರಮಿಸಬೇಕು. ಅಲ್ಲದೆ ಸಮುದಾಯದಲ್ಲಿ ಜಂತಹುಳು ತಡೆಗೆ ಶೌಚಕ್ಕಾಗಿ ಶೌಚಾಲಯಗಳ ಬಳಕೆ, ಊಟದ ಮೊದಲು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುಲು, ನಡೆಯುವಾಗ ಪಾದರಕ್ಷೆ ಬಳಕೆ, ಶುದ್ಧ ನೀರು ಸೇವನೆ, ಹಣ್ಣು ತರಕಾರಿ ಸ್ವಚ್ಛವಾಗಿ ತೊಳೆದು ಬಳಸುವುದು ಪೌಷ್ಟಿಕ ಆಹಾರ ಸೇವಿಸುವುದು ಜಂತುಹುಳು ತಡೆಗೆ ಸಹಕಾರಿಯಾಗಿವೆ ಎಂಬುದನ್ನು ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದರು.

ಇದಕ್ಕೂ ಮುಂಚೆ ಪ್ರಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳ ನಿಗಾವಣೆಯಲ್ಲಿ ಆರೋಗ್ಯ ಸಿಬ್ಬಂದಿಯವರು ಮಾತ್ರೆ ಚಿಪಿಸಿ ನುಂಗಿಸುವ ಕಾರ್ಯ ನಿರ್ವಹಿಸುತ್ತಿದ್ದು, ಗೈರುಹಾಜರಿ ಅಥವಾ ಅನಾರೋಗ್ಯದ ಕಾರಣದಿಂದಾಗಿ ಇಂದು ಯಾವುದಾದರೂ ಮಗು ಮಾತ್ರೆಯನ್ನು ತೆಗೆದುಕೊಳ್ಳು ಸಾಧ್ಯವಾಗದಿದ್ದಲ್ಲಿ ಅಂತ ಮಕ್ಕಳಿಗೆ ಫೆಬ್ರವರಿ 16 ರಂದು ಮಾಪ್ ಅಫ್ ದಿನದಂದು ಮಾತ್ರೆಗಳನ್ನು ಚಿಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಜಿಲ್ಲಾ ಬಿಸಿ ಊಟದ ಅಧಿಕಾರಿ ಪ್ರಭು, ತಾಲೂಕಾರೋಗ್ಯಾಧಿಕಾರಿ ಡಾ.ಅಮೃತ್ ಹುಕ್ಕೇರಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಯುನಸ್ ಬಾಬು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಮರೆಗೌಡ, ವೈದ್ಯಾಧಿಕಾರಿಗಳಾದ ಡಾ.ಅಶ್ವಾಕ್ ಹುಸೇನ್, ಡಾ.ಬುದ್ದಾನಂದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಡಿವೈಡಿಹೆಚ್‌ಇಓ ಬಸಯ್ಯ, ಮುಖ್ಯೊಪಾದ್ಯಾಯರಾದ ರಾಜಶೇಖರ್ ಪಾಟೀಲ್, ಡಿಪಿಎಮ್ ನವೀನ್ ಕುಮಾರ, ಆರ್‌ಕೆಎಸ್‌ಕೆ ಸಂಯೋಜಕರಾದ ಜ್ಯೋತಿ ಆಲೂರು, ಕಚೇರಿ ಅಧಿಕ್ಷಕ ವೆಂಕಟೇಶ್, ಹಿರಿಯ ಹೆಚ್‌ಐಓ ಸುರೇಶ್, ಬಿಹೆಚ್‌ಇಓ ಸರೋಜಾ ಕೆ, ಎಫ್‌ಡಿಎ ರಾಘವೇಂದ್ರ, ಸಿಬ್ಬಂದಿಯವರಾದ ಜಮೀಲ, ಅರುಣ್‌ಕುಮಾರ್, ವನೀತಾ, ಬಿಬ್ಲಿ ಬಾಚಯ್ಯ, ಸಿದ್ದಮ್ಮ, ಚಿರಂಜೀವಿ ಸೇರಿದಂತೆ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *