ಜಿಲ್ಲೆಯ ರೈತರು, ಕಾರ್ಮಿಕರು, ದಲಿತರು ಹಾಗೂ ಇತರೆ ದಮನಿತರ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚುವ, ಶ್ರೀಮಂತರು, ಭೂಮಾಲೀಕರು, ಭಾರೀ ಗುತ್ತೇದಾರಿಕೆ ಮಾಡುವ ರಾಜಕಾರಣಿಗಳು ಶಿಕ್ಷಣ ಹಾಗೂ ಆರೋಗ್ಯ ರಂಗದ ಮಾಫಿಯಾಗಳ ಸಡಗರ ಸಂಭ್ರಮ ಮೆರೆವ ರಾಯಚೂರು ಉತ್ಸವ ಇದಾಗಿದ್ದು, ಆಚರಣೆಯನ್ನು ಸಿಪಿಐ(ಎಂಎಲ್)ರೆಡ್ ಸ್ಟಾರ್ ತೀವ್ರವಾಗಿ ಖಂಡಿಸಿ ವಿರೋಧಿಸುತ್ತದೆ ಎಂದು ಎಂ.ಗಂಗಾಧರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಬಹು ಸಂಖ್ಯಾತ ಜನರು ಕಡಿಮೆ ಇಳುವರಿ, ಕಡಿಮೆ ಕೂಲಿ ಹಾಗೂ ಕುಸಿದ ಜೀವನದಿಂದ ಹೇಗಪ್ಪ ಜೀವನ ನಡೆಸೋದು ಎಂಬ ಚಿಂತೆಯಿಂದ ಒಂದು ಕಡೆಗೆ ಒದ್ದಾಡುತಿದ್ರೆ, ರಾಯಚೂರು ಆಳುವ ವರ್ಗಗಳು ಜಿಲ್ಲಾ ಹಬ್ಬದ ಸಡಗರ ಹಾಗೂ ಸಂಭ್ರಮದಲ್ಲಿ ತೇಲಾಡುತ್ತಿವೆ. ಹೊಟ್ಟೆಗೆ ಇಟ್ಟಿಲ್ಲದವನ ಮನೆಯಲ್ಲಿ ಜುಟ್ಟಿಗೆ ಮಲ್ಲಿಗೆ ಕಟ್ಟುವ ದುರಾಡಳಿತವಾಗಿದೆಂದು
ಸಿಪಿಐಎಂಲ್ ರೆಡ್ ಸ್ಟಾರ್ ಅಭಿಪ್ರಾಯ ಪಟ್ಟಿದೆ.
ಜಿಲ್ಲೆಯ ಬಹು ಮುಖ್ಯವಾದ ಆರ್ಥಿಕ ಶಕ್ತಿಯಾದ ರೈತ ಪರಿವರ್ತ ಹಾಗೂ ಕೃಷಿ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಸಾಮಾನ್ಯ ಅರಿವು ಇದ್ದವರು ಯಾರು ಈ ಹಬ್ಬದಲ್ಲಿ ಭಾಗವಹಿಸಲಾರರು. ಏಕೆಂದರೆ ಹತ್ತಿ, ಭತ್ತ, ತೊಗರಿ, ಮೆಣಸಿನಕಾಯಿ ಇಳುವರಿ ನೆಲಕಚ್ಚಿದೆ. ಬೆಲೆಯೂ ಬಿದ್ದೋಗಿದೆ. ಸರಾಸರಿ 3 ಲಕ್ಷ 70 ಸಾವಿರ ಎಕರೆ ಮುಂಗಾರು ಭತ್ತ ಶೇ. 70ರಷ್ಟು ಇಳುವರಿ ಕುಸಿದಿದೆ.
ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 15 ಲಕ್ಷ ಜನರಿಗೆ ಹಿಂಗಾರು ಬೆಳೆಯೇ ಇಲ್ಲ. ಗೇಟ್ ದುರಸ್ತಿ ನಿಮಿತ್ಯ ಹಿಂಗಾರಿ ನೀರು ನಿಲ್ಲಿಸಲಾಗಿದೆ. ಮುಂಗಾರು ಮಣ್ಣುಪಾಲಾಯಿತು ಹಿಂಗಾರು ಇಲ್ಲವೇ ಇಲ್ಲ. ಅಚ್ಚುಕಟ್ಟು ಪ್ರದೇಶದ ಶೇ.30ರಷ್ಟು ಜನರು ಗುಳೆ ಹೊರಟಿದ್ದಾರೆ. ಇದರ ಅರಿವು ಇಲ್ಲದೆ ಕಳೆದ ತಿಂಗಳು ಸಿಂಧನೂರಿನಲ್ಲಿ ಅಂಬಾದೇವಿಯ ಅಂಬೋತ್ಸವ ಆಚರಿಸಿದರು. ಈಗ ರಾಯಚೂರು ಉತ್ಸವದಲ್ಲಿ ತೇಲಾಡುತ್ತಿದ್ದಾರೆ.
“ರಾಯಚೂರು ಉತ್ಸವ: ಮದು ಮಕ್ಕಳಿಲ್ಲದ ಮದುವೆ”
ಜಿಲ್ಲೆಯ ಕೃಷಿ ಬಿಕ್ಕಟ್ಟಿನಿಂದ ಕೆಲಸ ಇಲ್ಲದಂತಾಗಿ, ಲಕ್ಷ ಲಕ್ಷ ಜನರು, ಕೃಷಿ ಕಾರ್ಮಿಕರು ಮುಂದಿನ 6 ತಿಂಗಳ ಜೀವನದ ಬಗ್ಗೆ ಚಿಂತಿಸುತ್ತಲೇ ಮನೆಗೊಬ್ಬರಂತೆ ಮುಂಬೈ, ಗೋವಾ, ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಜಿಲ್ಲೆಯಲ್ಲಿ ಗುತ್ತಿಗೆ ಹಾಗೂ ದಿನಗೂಲಿ ಆಧಾರಿತ ಕಾರ್ಮಿಕ ಹಾಗೂ ಸಣ್ಣ ನೌಕರರಿಗೆ ಸರಾಸರಿ 6 ತಿಂಗಳಿನಿಂದ ಸಂಬಳ ಪಾವತಿ ಮಾಡಿಲ್ಲ. ಸಂಬಳ ಕೇಳಿದರೆ ಕೆಲಸವಿಲ್ಲ. ತುಂಗಭದ್ರಾ, ಶಕ್ತಿನಗರ, ಹಟ್ಟಿ ಸೇರಿದಂತೆ ಪೌರಸೇವೆ, ಆರೋಗ್ಯ, ಶಿಕ್ಷಣ ಹಾಗೂ ಪಂಚಾಯತ್ ರಾಜ್ಯ ಇಲಾಖೆಗಳಲ್ಲಿ ದುಡಿದ ಕೂಲಿ ಕೊಡಿ ಎಂದು ನಡೆಯುತ್ತಿರುವ ಹೋರಾಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ದುಡಿದ ಕೂಲಿ ಕೊಡದ ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ಎಂದರೆ ಇದಕ್ಕಿಂತ ನಾಚಿಕೆಗೇಡು ಸಂಗತಿ ಮತ್ತೊಂದಿಲ್ಲ.
“ಎಡದೊರೆ ನಾಡಲ್ಲಿ ಕುಡಿಯಲು ನೀರಿಲ್ಲ ದೊರೆಗಳೇ”
ಜಿಲ್ಲೆಯಲ್ಲಿ ಅಂತರ್ಜಲ ಖುಷಿ ಇದೆ ಕುಡಿಯುವ ನೀರು ಹಾಗೂ ಕೃಷಿ ನೀರಾವರಿಯ ಎಲ್ಲಾ ಕಾಮಗಾರಿಗಳು ಅವ್ಯವಹಾರಕ್ಕೆ ಬಲಿಯಾಗಿ ಹೋಗಿವೆ. ಜಿಲ್ಲೆಯ 60 ಗ್ರಾಮಗಳು ಕುಡಿಯುವ ನೀರಿನ ವ್ಯವಸ್ಥೆಯಿಂದ ವಂಚಿತವಾಗಿವೆ. ಆರ್ ಓ ಪ್ಲಾಂಟ್ ಗಳು ಶೇ.70ರಷ್ಟು ಕೆಟ್ಟು ನಿಂತಿವೆ. ಆರ್ಸೇನಿಕ್ ಈಗಾಗಲೇ ಎಲ್ಲಾ ಕಡೆಗೆ ಅರಡಿಕೊಂಡಿದೆ. ಎಡದೊರೆ ನಾಡಿನ ಹಬ್ಬಕ್ಕೆ ಬರುವ ಅರಸರಿಗೆ, ಕಲಾವಿದರಿಗೆ, ಕುಣಿಯುವವರಿಗೆ, ಬಾರಿಸುವವರಿಗೆ, ನಗೆಸುವವರಿಗೆ ವಿನಂತಿ ಎಂದರೆ,
ಎರಡು ನದಿ, ಎರಡು ನಾಲೆ, ಸಾವಿರಕ್ಕೂ ಹೆಚ್ಚು ಕೆರೆಕುಂಟೆಗಳು ಹಾಗೂ ಹತ್ತಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಿರುವ ಜಿಲ್ಲೆ ರಾಯಚೂರು. ಆದರೆ, ಒಟ್ಟು ನೀರಾವರಿಗೋಳಗಾದ ಪ್ರದೇಶ ಕೇವಲ ಶೇ. 42ರಷ್ಟು ಮಾತ್ರ ಆಗಿದೆ. ಶೇ 38ರಷ್ಟು ಸರ್ಕಾರಿ ಶಾಖೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಂಬೋತ್ಸವ ಆಚರಿಸಿದ ಸಿಂಧನೂರಿನಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಅಂಗೈಯಲ್ಲಿ ತುಪ್ಪ ಇದ್ದರೂ, ಉಣುವ ಉಪ್ಪಿಗೂ ಗತಿ ಇಲ್ಲದ ಸ್ಥಿತಿ ಜಿಲ್ಲೆಯಲ್ಲಿದೆ. ನೇಕಾರನ ಹೆಂಡತಿ ಬತ್ತಲೆ ಎಂಬಂತಾಗಿದೆ! ಜಿಲ್ಲೆಯಲ್ಲಿ ಐದು ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳು ಭ್ರಷ್ಟಾಚಾರಕ್ಕೆ ಬಲಿಯಾಗಿವೆ!
ದಿವಾಳಿಯಾದ ಸರ್ಕಾರಿ ಆಸ್ಪತ್ರೆಗಳು:
ಕಸಾಯಿ ಖಾನೆಯಾದ ಖಾಸಗಿ ನರ್ಸಿಂಗ್ ಹೋಮ್ ಗಳು! ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಮೆಡಿಕಲ್ ಕಾಲೇಜು, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಇದ್ದರೂ, ನೂರಕ್ಕೆ 80ರಷ್ಟು ಗುರುತರ ಕಾಯಿಲೆ ಹೊಂದಿದ ರೋಗಿಗಳು ಹೈದರಾಬಾದ್, ಬೆಂಗಳೂರು, ಹಾಗೂ ಬಾಗಲಕೋಟೆಗೆ ಹೋಗುತ್ತಿದ್ದಾರೆ. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರತ ವೈದ್ಯರು ಹಾಗೂ ತಕ್ಕ ಔಷಧಿ ಸಿಗುವುದಿಲ್ಲ. ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಹಳ್ಳಿಯ ಬಡವರು ಖಾಸಗಿ ದವಖಾನೆಗಳಿಗೆ ಹೋಗುತ್ತಾರೆ. ಬಹುತೇಕ ಖಾಸಗಿ ನರ್ಸಿಂಗ್ ಹೋಮ್ ಗಳನ್ನು ಸರ್ಕಾರಿ ವೈದ್ಯರೇ ನಡೆಸುತ್ತಾರೆ. ಇಲ್ಲಿ ಬಡವರನ್ನು ಮನಸೋ ಇಚ್ಛೆ ಸುಲಿದು ಕಳಿಸುತ್ತಾರೆ. ಹಣ ಹೋಯ್ತು! ಹೆಣ ಹೋಯ್ತು! ಗುಣ ಹೋಯ್ತು! ಎಂದು ಕಣ್ಣೀರಾಕುವ ಬಡಜನರ ಬಗ್ಗೆ, ಅವರ ಸಾವು ನೋವುಗಳ ಬಗ್ಗೆ ಕೇಳುವವರಿಲ್ಲ.
ಹಾಗಾಗಿ ಈ ರಾಯಚೂರು ಹಬ್ಬ, ಇಲ್ಲಿನ ರೈತರು ಕಾರ್ಮಿಕರು ಹಾಗೂ ದಲಿತ ದಮನಿತರ ಜೀವನ ಸ್ಥಿತಿಗತಿಯನ್ನು ಅಪಹಾಸ್ಯ ಮಾಡುವಂತದ್ದಾಗಿದೆ. ಇದರಿಂದಾಗಿ ಆದ್ದರಿಂದಲೇ ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ: ರಾಜ್ಯ ಸಮಿತಿ ಸದಸ್ಯರಾದ ಆದೇಶ ನಗನೂರ, ಹೆಚ್.ಆರ್.ಹೊಸಮನಿ, ಮಾರುತಿ ಜಿನ್ನಾಪುರ, ಮುದಿಯಪ್ಪ, ಹನುಮಂತ ಗೋಡಿಹಾಳ, ಚಿದಾನಂದ, ಹುಲುಗಪ್ಪ ಬಳ್ಳಾರಿ, ವೆಂಕಟೇಶ್ ನಾಯಕ, ಧರಗಯ್ಯ, ಸೇರಿದಂತೆ ಇತರರು ಇದ್ದರು.

