ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ರೈತರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವಿನ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಗ್ರಾಮದ ರೈತರಾದ ರುದ್ರಪ್ಪ ಏಣಿಗಿ ಹಾಗೂ ಬೆಟ್ಟದಪ್ಪ ಮೂಲಿಮನಿ ಅವರಿಗೆ ಸೇರಿದ ಜೋಳದ ಹುಲ್ಲು ಹಾಗೂ ಕಡಲೆ ಒಟ್ಟಿನ ಬಣವೆಗಳು ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಬಂಡಿಯ ಮೇಲೆ ಸಂಗ್ರಹಿಸಿದ್ದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ರೈತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಣಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ಶಿವಕುಮಾರ ಏಣಿಗಿ, “ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯಿಂದ ಮಾನಸಿಕ ಹಾಗೂ ಆರ್ಥಿಕವಾಗಿ ಕುಂದಿರುವ ರೈತರಿಗೆ ಸರ್ಕಾರವು ತಕ್ಷಣ ಸೂಕ್ತ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.

