ರಾಯಚೂರು ಜನವರಿ 19 (ಕರ್ನಾಟಕ ವಾರ್ತೆ): ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ವ, ಶ್ರೀನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 2026-27ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅಗತ್ಯವಾದ ಪ್ರವೇಶ ಪರೀಕ್ಷೆ ಮತ್ತು ಆನ್‌ಲೈನ್ ಕೌನ್ಸಿಲಿಂಗ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುವುದು. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಮತ್ತು ಪೋಷಕರ ಅನುಕೂಲಕ್ಕಾಗಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಘೋಷಣಾ ಪತ್ರವನ್ನು ಪ್ರಚುರ ಪಡಿಸಲಾಗಿದೆ.
ಅಭ್ಯರ್ಥಿಗಳು / ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ವೆಬ್‌ಸೈಟ್ ನಿಂದ ಘೋಷಣಾ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ದಿನಾಂಕ: 25-01-2026 ರಂದು ಸಂಜೆ 4ಗಂಟೆಯೊಳಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಸತಿ ಶಾಲೆಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ 2,50,000 ರೂ., ಹಿಂದುಳಿದ ವರ್ಗದ ಪ್ರವರ್ಗ 1ಗೆ 2,50,000ರೂ., ಹಾಗೂ ಹಿಂದುಳಿದ ವರ್ಗದ ಪ್ರವರ್ಗ-2ಎ, 2ಬಿ,ಮತ್ತು 3ಬಿಗೆ 1,00,000 ರೂ.ಗಳ ವಾರ್ಷಿಕ ಆದಾಯದ ಮಿತಿ ಇರಬೇಕು.
6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಹಿತಿ ಪುಸ್ತಕ-2026ವನ್ನು ಪ್ರಾಧಿಕಾರ ವೆಬ್‌ಸೈಟ್ : https://cetonline.karnataka.gov.in/kea/kreis2026 2026 ನಲ್ಲಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್ಸೈಟ್ https://kreis.karnataka.gov.in ನಲ್ಲಿ ಪಡೆಯಬಹುದು. ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ದಿನಾಂಕ: 18-02-2026 ರಿಂದ ಈ ವೆಬ್ ಸೈಟ್‌ಗಳಿಂದ ಆಯಾ ವಸತಿ ಶಾಲೆಯಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಸೂಚನೆ: ಅಭ್ಯರ್ಥಿಯು ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ರಾಜ್ಯ ಸಂಖ್ಯೆ, ಇತ್ತೀಚಿನ ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ಅಥವಾ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಂಧಿಸಿದ ವಸತಿ ಶಾಲೆ / ಕಾಲೇಜಿನ ಮುಖ್ಯಸ್ಥರನ್ನು ಸಂಪರ್ಕಿಸಬೇಕು. ದಿನಾಂಕ: 01-03-2026ರ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ 100 ಅಂಕಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.
ವಸತಿ ಶಾಲೆಗಳ ಆಯ್ಕೆಯ ಆದ್ಯತಾ ಕ್ರಮದಲ್ಲಿ ನಮೂದಿಸುವ ಕುರಿತು: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಾರೋ, ಅಂತಹ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ದಾಖಲಿಸುವ ಶಾಲೆಗಳನ್ನು ಮಾತ್ರ ಹಂಚಿಕೆಗೆ ಪರಿಗಣಿಸಲಾಗುವುದು. ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಅವಕಾಶವನ್ನು ಹೆಚ್ಚಿಸಿಕೊಳ್ಳಲು ತಮ್ಮ ಜಿಲ್ಲೆಯಲ್ಲಿರುವ ಕೆಆರ್‌ಇಐಎಸ್‌ನ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸತಕ್ಕದು. ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್, ಮೀಸಲಾತಿ ಹಾಗೂ ಅಭ್ಯರ್ಥಿಗಳು ಪ್ರವೇಶಾತಿಗಾಗಿ ನಮೂದಿಸಿರುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ ಕಂಪ್ಯೂಟರ್ ಝೇಡ್ ಆಟೋ ಸೆಲೆಕ್ಷನ್ ಮೂಲಕ ಸೀಟು ಹಂಚಿಕೆಯನ್ನು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
