ಮಸ್ಕಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸಿ ಬಡ-ಕೂಲಿ ಕಾರ್ಮಿಕರ ವಿರೋಧಿಯಾಗಿ ರೂಪಿಸಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ೨೦ ವರ್ಷಗಳ ಕಾಲ ದೇಶದ ಜನರಿಗೆ ಉದ್ಯೋಗದ ಖಾತ್ರಿ ಒದಗಿಸಿದ್ದ ಯೋಜನೆಯನ್ನು ಬದಲಾವಣೆ ಮಾಡಿ ಜನ ಸಾಮಾನ್ಯರ ಹಕ್ಕು ಕೇಂದ್ರೀಕರಿಸಿ ವಿಕೇಂದ್ರಿಕರಣ ವ್ಯವವಸ್ಥೆಗೆ ಧಕ್ಕೆ ತರಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಜತೆಗೆ ಸಾರ್ವಜನಿಕ ಆಸ್ತಿ ನಿರ್ಮಾಣ ಮಾಡುವುದು ನರೇಗಾ ಯೋಜನೆಯ ಉದ್ದೇಶ. ೨೦೦೫ರಲ್ಲಿ ಯುಪಿಎ ಸರ್ಕಾರ ಇದನ್ನು ಜಾರಿಗೆ ತಂದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಕಾಮಗಾರಿ ಆಯ್ಕೆ ಮಾಡಿ ಕನಿಷ್ಠ ೧೦೦ ದಿನ ಕೆಲಸ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರದ ಈ ಹೊಸ ಕಾಯ್ದೆ ಪ್ರಕಾರ ಕಾಮಗಾರಿಗಳ ಆಯ್ಕೆ ದೆಹಲಿಯಿಂದ ನಡೆಯಲಿದೆ. ಗ್ರಾಮ ಪಂಚಾಯಿತಿ ಅಧಿಕಾರ ಕಸಿದುಕೊಳ್ಳುತ್ತಿದೆ. ಈ ಹಿಂದೆ ಶೇ ೯೦ರಷ್ಟು ಅನುದಾನ ನೀಡುತ್ತಿದ್ದ ಕೇಂದ್ರ ಸರ್ಕಾರ, ಈಗ ಅದನ್ನು ಶೇ ೬೦ಕ್ಕೆ ಇಳಿಕೆ ಮಾಡಿದೆ. ಶೇ ೪೦ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದ್ದು, ರಾಜ್ಯಗಳ ಮೇಲೆ ಅರ್ಥಿಕ ಹೊರೆ ಹೆಚ್ಚಾಗಲಿದೆ ಎಂದರು.
ನAತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ ಗ್ರಾಮೀಣ ಭಾಗದ ಜನರ ಬದುಕಿನ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ, ರೈತರ ಹೊಟ್ಟೆ ಮೇಲೆ ಬರೆ ಎಳೆಯಲು ಹೊರಟಿದೆ. ಈ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜನಪರವಾದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಿಸಲು ಹೊರಟಿದೆ. ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರು ತೆಗೆಯುವುದುರ ಮೂಲಕ ನರೇಗಾ ಯೋಜನೆಯ ಮೂಲ ಸ್ವರೂಪವನ್ನು ಬದಲಿಸಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಕಾರ್ಯಕ್ರಮಗಳಿಗೆ ಬಿಜೆಪಿ ಹೊಸ ಹೆಸರು ನೀಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಟೀಕಿಸಿದರು. ಈ ಹಿಂದೆ ನರೇಗಾದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಕಾಂಪೌಂಡ್ ಹಾಗೂ ನಮ್ಮ ಹೊಲ ನಮ್ಮ ರಸ್ತೆ ರೀತಿಯ ಕಾಮಗಾರಿ ನಡೆಯುತ್ತಿತ್ತು. ಈ ರೀತಿಯ ಯೋಜನೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಲು ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಮೈಬುಸಾಬ ಮುದ್ದಾಪೂರು, ಹನುಮೇಶ ಬಾಗೋಡಿ ಇದ್ದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಡಜನರ ಹಿತ ಕಾಪಾಡುವ ಮನಸ್ಸಿದ್ದರೆ ಹೊಸ ಯೋಜನೆಗಳನ್ನು ಜಾರಿಗೆ ತಂದು ಹೆಸರನ್ನು ಇಟ್ಟು ಜನರಿಗೆ ಅನುಕೂಲ ಮಾಡಲಿ – ಶಾಸಕ ಆರ್ ಬಸನಗೌಡ ತುರುವಿಹಾಳ.
ಕೋಟ್: – ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡ ಹಾಗೂ ರೈತ ವಿರೋಧಿ ನೀತಿಗಳನ್ನೇ ಜಾರಿಗೆ ತರುತ್ತಿದ್ದು ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಹೋರಾಟ ಮಾಡಲಾಗುವುದು.- ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ.

