ಮಾನ್ವಿ : ಸಂಗಾಪೂರ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕೂಲಿ ಕಾರ್ಮಿಕರಿಗೆ ಜಿಲ್ಲಾ ಪಂಚಾಯತ್ ರಾಯಚೂರು, ತಾಲೂಕು ಪಂಚಾಯಿತಿ ಮಾನ್ವಿ ಹಾಗೂ ಆರೋಗ್ಯ ಇಲಾಖೆ ಮಾನ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸುಭಾನ್ ಸಮುದಾಯ ಆರೋಗ್ಯಾಧಿಕಾರಿಗಳು ಮಾತನಾಡಿ, ಚಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬಿಸಿ ನೀರನ್ನು ಕುಡಿಯಲು ಸಲಹೆ ನೀಡಿದರು. ಪ್ರತಿಯೊಬ್ಬ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕನಿಷ್ಠ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ಕಫ ಹೆಚ್ಚಾದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮನೆ ಸುತ್ತಮುತ್ತಲಿರುವ ಡಬ್ಬಿ ಹಾಗೂ ಟ್ಯಾಂಕರ್‌ಗಳ ನೀರನ್ನು ವಾರಕ್ಕೊಮ್ಮೆ ಬದಲಾಯಿಸುವುದು ಅನಿವಾರ್ಯವಾಗಿದ್ದು, ಇದರಿಂದ ಡೆಂಗಿ ಹಾಗೂ ಮಲೇರಿಯಾ ರೋಗಗಳನ್ನು ತಡೆಯಬಹುದು ಎಂದು ಸ್ವಚ್ಚತೆಯ ಮಹತ್ವವನ್ನು ವಿವರಿಸಿದರು.
ಶಿಬಿರದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಬಿಪಿ, ರಕ್ತ ಪರೀಕ್ಷೆ, ಕಫ ಪರೀಕ್ಷೆ ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಿ, ಅವಶ್ಯಕತೆ ಇರುವವರಿಗೆ ಸ್ಥಳದಲ್ಲೇ ಔಷಧಿಗಳನ್ನು ವಿತರಿಸಲಾಯಿತು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಸ್ರ ಜಬೀನಾ ಖಾನಂ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು NMMS ತಂತ್ರಾಂಶದಲ್ಲಿ ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ತಿಳಿಸಿದರು. ಸರ್ಕಾರದ ಆದೇಶದಂತೆ ನರೇಗಾ ಯೋಜನೆಯಡಿ ದಿನದ ಕೂಲಿ ದರವನ್ನು ರೂ. 370/-ಕ್ಕೆ ಹೆಚ್ಚಿಸಲಾಗಿದ್ದು, ಇದು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯಾಗಿದೆ ಎಂದು ಹೇಳಿದರು.
“ವಲಸೆ ಯಾಕ್ರಿ – ನಿಮ್ಮೂರಲ್ಲೇ ಉದ್ಯೋಗ ಖಾತರಿ” ಹಾಗೂ ಸ್ತ್ರೀ ಚೇತನ ಅಭಿಯಾನದಡಿ ಗಂಡು–ಹೆಣ್ಣು ಸಮಾನವಾಗಿ ರೂ. 370/- ಕೂಲಿ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸದ ಭರವಸೆ ಇದೆ. ಒಂದು ಕುಟುಂಬ 100 ದಿನ ಕೆಲಸ ಮಾಡಿದಲ್ಲಿ ರೂ. 37,000/- ಕೂಲಿ ಹಣ ಪಡೆಯಬಹುದು ಎಂದು ವಿವರಿಸಿದರು.
ಇದೇ ವೇಳೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಗರ್ಭಿಣಿಯರಿಗೆ ಶೇಕಡಾ 50% ಕೆಲಸ ಮಾಡಿದರೂ ಪೂರ್ಣ ಪ್ರಮಾಣದ ಕೂಲಿ ನೀಡಲಾಗುತ್ತದೆ ಎಂದು ತಿಳಿಸಲಾಯಿತು. 3 ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಕೆಲಸಕ್ಕೆ ಬರಬೇಕು ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದು ಎಂದು ಸೂಚನೆ ನೀಡಲಾಯಿತು.
ಎನ್‌ಎಂಎಂಎಸ್ ಹಾಜರಾತಿಯನ್ನು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಯಲ್ಲಮ್ಮ ಪ್ರಾಥಮಿಕ ಸಮುದಾಯ ಸುರಕ್ಷಾಧಿಕಾರಿಗಳು, ಈರೇಶ್ ತಾಲೂಕು ಐಇಸಿ ಸಂಯೋಜಕರು, ಆಶಾ ಕಾರ್ಯಕರ್ತೆಯರಾದ ಶ್ರೀದೇವಿ, ನೀಲಮ್ಮ, ಕರಿಬಸಯ್ಯ ಡಿಇಒ, ರಾಯಪ್ಪ ಬಿಎಫ್‌ಟಿ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.


