ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಮಾನ್ವಿ ಶಾಖೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ ನಿರ್ದೇಶನದಂತೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು.
ಚುನಾವಣೆ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಹುಮತದಿಂದ ಶಿವಕುಮಾರ್ ಚಲ್ಮಲ್ ಅವರು ಮಾನ್ವಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಶಫೀಕ್ ಹುಸೇನ್, ಪ್ರಧಾನ ಕಾರ್ಯದರ್ಶಿಗಳಾಗಿ ಹುಸೇನ್ ಬಾಷಾ ನಕ್ಕುಂದಿ, ಉಪಾಧ್ಯಕ್ಷರಾಗಿ ಹೊನ್ನಪ್ಪ ಕಟ್ಟಿಮನಿ ಹಾಗೂ ಆಂಜನೇಯ ನಸ್ಲಾಪುರ, ಖಜಾಂಚಿಗಳಾಗಿ ನರಸಿಂಹ ರೆಡ್ಡಿ, ಕಾರ್ಯದರ್ಶಿಗಳಾಗಿ ಬಸವರಾಜ ನಿಲೋಗಲ್, ಸಹ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಗೌಸ್, ಸಂಘಟನಾ ಕಾರ್ಯದರ್ಶಿಗಳಾಗಿ ಈರಪ್ಪ ನಾಯಕ ದದ್ದಲ್, ಜಂಟಿ ಕಾರ್ಯದರ್ಶಿಗಳಾಗಿ ಬಸವಲಿಂಗ ನಾಯಕ ನೀರಮಾನ್ವಿ ಅವರನ್ನು ಆಯ್ಕೆ ಮಾಡಲಾಯಿತು.
ಎಲ್ಲಾ ನೂತನ ಪದಾಧಿಕಾರಿಗಳಿಗೆ ಆಯ್ಕೆ ಪತ್ರಗಳನ್ನು ವಿತರಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸೈಯದ್ ಅಬ್ದುಲ್ ಗಣಿ ಸಾಹೇಬ್ “ಪತ್ರಕರ್ತರ ಹಕ್ಕು ರಕ್ಷಣೆ, ವೃತ್ತಿಪರ ಗೌರವ ಮತ್ತು ಏಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಾನ್ವಿ ಶಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಂಘಟನೆಯ ನಿಯಮಾವಳಿ ಮತ್ತು ಉದ್ದೇಶಗಳಿಗೆ ಬದ್ಧರಾಗಿ ಕೆಲಸ ಮಾಡುವಂತೆ” ಸಲಹೆ ನೀಡಿದರು.
ನೂತನವಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ ಶಿವಕುಮಾರ್ ಚಲ್ಮಲ್ ಮಾತನಾಡಿ, “ಮಾನ್ವಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗುವುದು, ಅವರ ಸುರಕ್ಷತೆ ಹಾಗೂ ವೃತ್ತಿಪರ ಹಿತಾಸಕ್ತಿಗಳನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ. ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವಿನೋದ ಕುಮಾರ್, ಜಿಲ್ಲಾ ಕಾರ್ಯದರ್ಶಿ ವಿರುಪಾಕ್ಷಯ್ಯ ಸ್ವಾಮಿ ಅಂತರಗಂಗಿ, ಜಿಲ್ಲಾ ಉಪಾಧ್ಯಕ್ಷ ಬಿ.ಜಿ. ಅಂಜನೇಯ ವಡವಾಟಿ ಸೇರಿದಂತೆ ಮಾನ್ವಿ ಘಟಕದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

