ಊರು ಇನ್ನೂ ನಿದ್ರೆಯ ಮಂಪರಿನಲ್ಲಿರುವಾಗಲೇ, ಜಗತ್ತಿನ ಸುದ್ದಿಯನ್ನು ನಿಮ್ಮ ಮನೆಯ ಅಂಗಳಕ್ಕೆ ತಲುಪಿಸಲು ಹೊರಡುವ ಈ ವ್ಯಕ್ತಿಯನ್ನು ನೋಡಿ. ಇವರೇ ಬಳಗಾನೂರಿನ ರಾಜಶೇಖರ್ ನಾಗಲೀಕರ್. ಚಳಿ ಇರಲಿ, ಗಾಳಿ ಇರಲಿ ಅಥವಾ ಸುರಿಯುವ ಮಳೆಯೇ ಇರಲಿ… ಕಳೆದ 36 ವರ್ಷಗಳಿಂದ ಇವರ ಕಾಯಕ ನಿಂತಿಲ್ಲ!

ಹಿರಿಯರು ಹೇಳುತ್ತಾರೆ,ಶ್ರದ್ಧೆ ಮತ್ತು ಶ್ರಮವಿದ್ದರೆ ಯಾವುದೇ ಕೆಲಸ ಹೊರೆಯಾಗದು’ ಎಂದು. ರಾಜಶೇಖರ್ ಅವರು ಅದನ್ನು ನಿಜವಾಗಿಸಿ ತೋರಿಸಿದ್ದಾರೆ. ಕೇವಲ ದಿನಪತ್ರಿಕೆಗಳನ್ನು ಹಂಚುತ್ತಲೇ ಒಂದು ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ,ಕುಟುಂಬವನ್ನು ನಿರ್ವಹಿಸಿದ್ದಾರೆ. ಸಮಾಜಕ್ಕೆ ಇವರೊಂದು ದೊಡ್ಡ ಮಾದರಿ.

ಆದರೆ ಈ ಕಥೆಯ ಇನ್ನೊಂದು ಮಗ್ಗುಲು ತುಂಬಾ ನೋವಿನದ್ದು. ಪತ್ರಿಕೆಗಳು ದೇಶದ ನೊಂದವರ, ಬೆಂದವರ ಧ್ವನಿಯಾಗುತ್ತವೆ. ಸರ್ಕಾರದ ಗಮನ ಸೆಳೆದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುತ್ತವೆ. ಆದರೆ, ಆ ಪತ್ರಿಕೆಗಳನ್ನು ಜನರ ಮನೆ-ಮನಕ್ಕೆ ತಲುಪಿಸುವ ಈ ‘ಸುದ್ದಿ ಹರಿಕಾರರ’ ಸ್ಥಿತಿ ಹೇಗಿದೆ ಗೊತ್ತಾ?

ಪತ್ರಿಕಾ ಮಾಲಕರು ಮತ್ತು ಸಂಪಾದಕರು ತಮ್ಮ ಪತ್ರಿಕೆಯ ಪ್ರಸಾರಕ್ಕಾಗಿ ಹಗಲಿರುಳು ಶ್ರಮಿಸುವ ಈ ವಿತರಕರಿಗೆ ಕನಿಷ್ಠ ಭದ್ರತೆಯನ್ನೂ ನೀಡಿಲ್ಲ ಎನ್ನುವುದು ವಿಪರ್ಯಾಸ! ಇವರಿಗೆ ಜೀವ ವಿಮೆ ಇಲ್ಲ, ಆರೋಗ್ಯ ವಿಮೆ ಇಲ್ಲ, ಯಾವುದೇ ಸಾಮಾಜಿಕ ಭದ್ರತೆಯೂ ಇಲ್ಲ. ಪತ್ರಿಕೆ ಪ್ರಕಟಿಸುವುದು ಎಷ್ಟು ಮುಖ್ಯವೋ, ಅದು ಓದುಗರ ಕೈ ಸೇರುವುದು ಅಷ್ಟೇ ಮುಖ್ಯ. ಅಂತಹ ಕೆಲಸ ಮಾಡುವವರಿಗೆ ಸೌಲಭ್ಯ ನೀಡದಿರುವುದು ನಿಜಕ್ಕೂ ‘ದೀಪದ ಬುಡದಲ್ಲೇ ಕತ್ತಲು’ ಎಂಬಂತಿದೆ.

ಬಳಗಾನೂರಿನ ಈ ಹಿರಿಯ ಚೇತನ ರಾಜಶೇಖರ್ ನಾಗಲೀಕರ್ ಅವರ 36 ವರ್ಷಗಳ ಸೇವೆಗೆ ಗೌರವ ಸಿಗುವುದು ಯಾವಾಗ? ಪತ್ರಿಕಾ ಸಂಸ್ಥೆಗಳು ಮತ್ತು ಸರ್ಕಾರ ಇಂತಹ ಪ್ರಾಮಾಣಿಕ ಕೆಲಸಗಾರರತ್ತ ಗಮನ ಹರಿಸುತ್ತದೆಯೇ? ಈ ಧ್ವನಿ ಮರೆಯಾಗಬಾರದು.
ವರದಿ: ಸುರೇಶ ಬಳಗಾನೂರು

Leave a Reply

Your email address will not be published. Required fields are marked *