ಸಿರವಾರ : ರಾಜೀನಾಮೆಯಿಂದ ತೆರವಾದ ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜನವರಿ 20ರಂದು ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದೆ.
20 ಸದಸ್ಯರ ಸಂಖ್ಯಾ ಬಲದ ಪಟ್ಟಣ ಪಂಚಾಯಿತಿಯಲ್ಲಿ 20 ಜನ ಸದಸ್ಯರಲ್ಲಿ 9 ಕಾಂಗ್ರೆಸ್‌ ಬೆಂಬಲಿತ, 6 ಬಿಜೆಪಿ, ಜೆಡಿಎಸ್ 3 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮೊದಲ ಅವಧಿಗೆ ವೈ.ಭೂಪನಗೌಡ ಟಾಸ್ ಮೂಲಕ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಹಾಲಿ ಅಧ್ಯಕ್ಷ ವೈ.ಭೂಪನಗೌಡ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ.

ಮೊದಲ ಅವಧಿಯ ಇನ್ನುಳಿದ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಾಂಗ್ರೆಸ್‌ನಿಂದ ಹಸೇನ ಅಲಿಸಾಬ, ಹಾಜಿಚೌದ್ರಿ, ಸೂರಿ ದುರುಗಣ್ಣ ನಾಯಕ, ಮೌಲಾಸಾಬ ವರ್ಚಸ್ ಅವರು ಹೈಕಮಾಂಡ್ ಮನವೊಲಿಸಲು ಮುಂದಾಗಿದ್ದಾರೆ. 12ನೇ ವಾರ್ಡ್‌ಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜ್ಯೋತಿ ದಾನನಗೌಡ ಅವರಿಗೆ ಹೈಕಮಾಂಡ್ ಮಣೆ ಹಾಕಿದರೆ ಅಚ್ಚರಿ ಪಡಬೇಕಾಗಿಲ್ಲ.

ಬಿಜೆಪಿಯಿಂದಲೂ ಕೃಷ್ಣ ನಾಯಕ ಮತ್ತು ಸಂದೀಪ ಪಾಟೀಲ ಆಕಾಂಕ್ಷಿಗಳಾಗಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅಧ್ಯಕ್ಷರ ಚುನಾವಣೆಗೆ 20 ಸದಸ್ಯರು, ಸಂಸದ, ಶಾಸಕ ಸೇರಿದಂತೆ 22 ಮತದಾರರಿದ್ದು, ಇಬ್ಬರು ಪಕ್ಷೇತರರೇ ನಿರ್ಣಾಕವಾಗಲಿದ್ದಾರೆ.

ಕಾಂಗ್ರೆಸ್ 9 +2 ಒಟ್ಟು 11, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ 6+3=9 ಮತ್ತು ಇಬ್ಬರು ಪಕ್ಷೇತರರು ಸೇರಿ 11 ಆಗಲಿದ್ದು, ಇದೇ ರೀತಿ ಬೆಂಬಲ ವ್ಯಕ್ತವಾದರೆ ಅತೃಪ್ತ ಆಕಾಂಕ್ಷಿಗಳ ಬೆಂಬಲದಿಂದ ಅಧ್ಯಕ್ಷರಾಗುವ ತವಕದಲ್ಲಿದ್ದಾರೆ.

Leave a Reply

Your email address will not be published. Required fields are marked *