“ನಮಸ್ಕಾರ… ನಾನು ನಿಮ್ಮ ಬಳಗಾನೂರು ಪೊಲೀಸ್ ಠಾಣೆ. ಇನ್ನು ಕೆಲವೇ ದಿನಗಳಲ್ಲಿ ನಾನು ಕೇವಲ ಮಣ್ಣಿನ ರಾಶಿಯಾಗಬಹುದು ಅಥವಾ ನಿಮ್ಮ ನೆನಪುಗಳಲ್ಲಿ ಮಾತ್ರ ಉಳಿಯಬಹುದು.ಆದರೆ ನೆಲಸಮವಾಗುವ ಮುನ್ನ ನನ್ನ ಒಡಲಲ್ಲಿ ಅಡಗಿರುವ 90 ವರ್ಷಗಳ ಕಥೆಯನ್ನು ನಿಮಗೊಮ್ಮೆ ಹೇಳಲೇಬೇಕು.
ಬಳಗಾನೂರು ಒಂದು ಕಾಲದಲ್ಲಿ ವ್ಯಾಪಾರ ಮತ್ತು ಕೃಷಿ ಚಟುವಟಿಕೆಗಳ ಕೇಂದ್ರವಾಗಿತ್ತು. ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಬ್ರಿಟಿಷರ ಕಾಲದ ನಂತರದ ಆರಂಭಿಕ ದಶಕಗಳಲ್ಲಿ ನಾನು ತಲೆ ಎತ್ತಿದೆ.
ಕಾಲಕ್ರಮೇಣ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೇರಿದೆ.
ನನ್ನ ಕಣ್ಗಾವಲಿಗೆ ಸುಮಾರು ಅರವತ್ತೆರಡು ಹಳ್ಳಿಗಳು ಬರುತ್ತವೆ.ಒಬ್ಬರು ಆರಕ್ಷಕ ಉಪನಿರೀಕ್ಷಕರು,ಇಬ್ಬರು ಸಹಾಯಕ ಉಪ ನಿರೀಕ್ಷಕರು,ಏಳುಜನ ಮುಖ್ಯ ಪೇದೆಗಳು,ಹಾಗೂ ಹದಿನೆಂಟು ಜನ ಪೊಲೀಸ್ ಪೇದೆಗಳೇ ನನ್ನ ಸೈನ್ಯ.
ನಾನು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಆಯಕಟ್ಟಿನ ಸ್ಥಳದಲ್ಲಿದ್ದೇನೆ.
ಈ ಭಾಗದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶವಿರುವುದರಿಂದ,ರೈತರ ನಡುವಿನ ನೀರಿನ ಹಂಚಿಕೆ ಗಲಾಟೆಗಳನ್ನೂ ನಿಯಂತ್ರಿಸಿದ್ದೇನೆ
ನಾನು ಜನಿಸಿದ್ದು 1933 ರಲ್ಲಿ.ಅಂದರೆ, ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ, ಬ್ರಿಟಿಷರ ಆಳ್ವಿಕೆಯ ಕಾಲವದು. ಅಂದಿನಿಂದ ಇಂದಿನವರೆಗೂ,ಈ ಒಂಬತ್ತು ದಶಕಗಳಲ್ಲಿ ನಾನು ಎಷ್ಟೊಂದು ಬದಲಾವಣೆಗಳನ್ನು ಕಂಡಿದ್ದೇನೆ ಅಲ್ಲವೇ?
ಹೈದರಾಬಾದ್ ನಿಜಾಮರ ಕಾಲದ ಆಡಳಿತದಿಂದ ಹಿಡಿದು,ಭಾರತದ ಸ್ವಾತಂತ್ರ್ಯೋತ್ಸವದ ಸಂಭ್ರಮದವರೆಗೆ; ಕರ್ನಾಟಕ ಏಕೀಕರಣದ ಹೋರಾಟದಿಂದ ಹಿಡಿದು ಇಂದಿನ ಆಧುನಿಕ ಡಿಜಿಟಲ್ ಯುಗದವರೆಗೆ ಎಲ್ಲವನ್ನೂ ಕಣ್ಣಾರೆ ಕಂಡವನು ನಾನು.
ನಾನು ಕೇವಲ ಕಟ್ಟಡವಲ್ಲ…
ನನ್ನ ಗೋಡೆಗಳಲ್ಲಿ ಅಂಟಿಕೊಂಡಿರುವುದು
ಹಳ್ಳಿಯ ಹಸಿವು,ಭಯ,ನಿರೀಕ್ಷೆ,ನ್ಯಾಯದ ಕನಸು.
ರಾತ್ರಿ ಮೌನವಾಗಿದ್ದರೂ
ನನ್ನೊಳಗೆ ಜಾಗೃತಿಯ ದೀಪ ಆರದು.
ಅಳಲು ಕೇಳಿದರೆ ಬಾಗಿಲು ತೆರೆದು,
ಅನ್ಯಾಯ ಕಂಡರೆ ಎದೆ ಗಟ್ಟಿ ಮಾಡಿಕೊಳ್ಳುತ್ತೇನೆ.
ಕಳ್ಳತನದ ದೂರು ಬಂದ ದಿನಗಳಿವೆ,
ಕಳೆದುಕೊಂಡ ಮಗುವಿನ ಕಣ್ಣೀರಿದೆ,
ಸಂಧಿಯಲ್ಲೇ ಬಿದ್ದ ಬಡವನ ನಿಟ್ಟುಸಿರೂ ಇದೆ,
ಹಾಗೇ… ನ್ಯಾಯ ಸಿಕ್ಕಾಗ ಹರಿದ ಸಂತೋಷವೂ ಇದೆ.
ನನ್ನ ಮೇಜಿನ ಮೇಲೆ ಇರುವ ಫೈಲುಗಳಿಗಿಂತ
ಮಾನವನ ಜೀವವೇ ನನಗೆ ಮುಖ್ಯ.
ಕಾನೂನು ನನ್ನ ಭಾಷೆ,
ಮಾನವೀಯತೆ ನನ್ನ ಹೃದಯ.
ಕೆಲವೊಮ್ಮೆ ನಿಂದನೆ ಕೇಳುತ್ತೇನೆ,
ಕೆಲವೊಮ್ಮೆ ನಂಬಿಕೆ.
ಆದರೂ ನಾನು ನಿಲ್ಲುತ್ತೇನೆ,
ಗ್ರಾಮದ ರಕ್ಷಣೆಯ ಪ್ರತಿಜ್ಞೆಯೊಂದಿಗೆ.
ನಾನು ಬಳಗಾನೂರು ಆರಕ್ಷಕ ಠಾಣೆ.
ನ್ಯಾಯದ ಕಾವಲುಗಾರ,
ಜನರ ನಂಬಿಕೆಯ ನೆರಳು.
ನನ್ನ ಗೋಡೆಗಳ ಮೇಲೆ ಎಷ್ಟೋ ಜನರ ಕಣ್ಣೀರು ಬಿದ್ದಿದೆ,ಎಷ್ಟೋ ಜನರಿಗೆ ನ್ಯಾಯ ಸಿಕ್ಕಾಗ ಅವರ ಮುಖದಲ್ಲಿ ಅರಳಿದ ನಗು ನನಗಷ್ಟೇ ಗೊತ್ತು.ಈ ಭಾಗದ ಎಷ್ಟೋ ರೌಡಿಗಳಿಗೆ ನನ್ನ ಹೆಸರು ಕೇಳಿದರೆ ನಡುಕ ಹುಟ್ಟುತ್ತಿತ್ತು,ಅದೇ ರೀತಿ ಅಸಹಾಯಕರಿಗೆ ನನ್ನ ಆವರಣದೊಳಗೆ ಬಂದಾಗ ‘ರಕ್ಷಣೆ ಇದೆ’ ಎಂಬ ಭರವಸೆ ಸಿಗುತ್ತಿತ್ತು.
ಎಷ್ಟೋ ದಕ್ಷ ಅಧಿಕಾರಿಗಳು ನನ್ನ ಈ ಹಳೆಯ ಕೋಣೆಗಳಲ್ಲಿ ಕುಳಿತು ಜನಸೇವೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೂರಾರು ಪೇದೆಗಳು ಹಗಲು-ರಾತ್ರಿ ಎನ್ನದೆ ನನ್ನ ನೆರಳಿನಲ್ಲಿ ವಿಶ್ರಮಿಸಿ,ನಾಡಿನ ಶಾಂತಿಗಾಗಿ ಶ್ರಮಿಸಿದ್ದಾರೆ.
ಪ್ರಸ್ತುತ ಎರಿಯಪ್ಪ ಅಂಗಡಿಯವರು ಠಾಣಾಧಿಕಾರಿಗಳಾಗಿ ಅದೇ ಗತ್ತು ಗೈರತ್ತಿನಿಂದ ರಕ್ಷಣಾ ಕಾರ್ಯದ ಚುಕ್ಕಾಣಿ ಹಿಡಿದಿದ್ದಾರೆ.
ಭೀಕರ ಬರಗಾಲ,ತುಂಗಭದ್ರೆಯ ಪ್ರವಾಹ ಮತ್ತು ಹಳ್ಳಿಗಳ ನಡುವಿನ ಸಣ್ಣಪುಟ್ಟ ಜಗಳಗಳನ್ನೆಲ್ಲ ನಾನು ಮೌನವಾಗಿ ಸಹಿಸಿಕೊಂಡಿದ್ದೇನೆ.
ಈಗ ಕಾಲ ಬದಲಾಗಿದೆ.ನನ್ನ ಗೋಡೆಗಳು ಸಡಿಲವಾಗಿರಬಹುದು,ಮೇಲ್ಛಾವಣಿಯಿಂದ ನೀರು ಸೋರುತ್ತಿರಬಹುದು,ಸುಣ್ಣ-ಬಣ್ಣ ಮಾಸಿರಬಹುದು.ಆದರೆ ನನ್ನಲ್ಲಿರುವ ಆ ‘ಗಾಂಭೀರ್ಯ’ ಮಾತ್ರ ಹಾಗೆಯೇ ಇದೆ.
ಇಂದು ನನ್ನ ಪಕ್ಕದಲ್ಲೇ ಅತ್ಯಾಧುನಿಕ ಸೌಲಭ್ಯಗಳಿರುವ ಹೊಸ ಕಟ್ಟಡ ತಲೆ ಎತ್ತುತ್ತಿದೆ.ಅದಕ್ಕೆ ಜಾಗ ಮಾಡಿಕೊಡಲು ನಾನು ಮಣ್ಣಾಗಲೇಬೇಕು.ಅದು ಪ್ರಕೃತಿ ನಿಯಮ.
ನಾನು ಉರುಳಿ ಬಿದ್ದಾಗ ಕೇವಲ ಕಲ್ಲು, ಮಣ್ಣು ಸಿಗಲಿಕ್ಕಿಲ್ಲ; ಅದರ ಜೊತೆಗೆ ಈ ಭಾಗದ ಹಿರಿಯರ ಎಷ್ಟೋ ನೆನಪುಗಳು ಮಣ್ಣಲ್ಲಿ ಬೆರೆಯುತ್ತವೆ.ಹೊಸ ಕಟ್ಟಡ ಬಂದರೂ,1933 ರಿಂದ ನಾನು ಕಾಪಾಡಿಕೊಂಡು ಬಂದ ಆ ‘ನ್ಯಾಯ ಮತ್ತು ಧರ್ಮ’ದ ಸಂಪ್ರದಾಯವನ್ನು ಹೊಸ ಗೋಡೆಗಳು ಮುಂದುವರಿಸಲಿ ಎಂಬುವುದೇ ನನ್ನ ಕೊನೆಯ ಆಸೆ.
ಹೋಗಿ ಬರುತ್ತೇನೆ… ನೆನಪಿಡಿ, ನಾನು ಕೇವಲ ಕಟ್ಟಡವಾಗಿರಲಿಲ್ಲ, ಬಳಗಾನೂರಿನ ಭದ್ರತೆಯ ಸಾಕ್ಷಿಯಾಗಿದ್ದೆ.”
ಸ್ಟೋರಿ,ಸುರೇಶ ಬಳಗಾನೂರು.

