ರಾಯಚೂರು ಜನವರಿ 07 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹವು ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ ಪಾಲಕರು ತಮ್ಮ ಮಗಳು ಅಥವಾ ಮಗನಿಗೆ ಬಾಲ್ಯ ವಿವಾಹ ಮಾಡುವುದರಿಂದ ಅವರ ಉನ್ನತ ಸಾಧನೆಗೆ ಪಾಲಕರೆ ಅಡ್ಡಿಪಡಿಸಿದಂತೆ, ಮಕ್ಕಳ ಜೀವನದ ಉನ್ನತ ಗುರಿ ಸಾಧನೆಗಾಗಿ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಮುಂದಾಗಬೇಕು ಎಂದು ಕಲ್ಮಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಇತ್ತಿಚೀಗೆ ತಾಲೂಕಿನ ಕಲ್ಮಲ ಗ್ರಾಮದ ಮೇಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಬಾಲ್ಯವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆಯ ಜಾಗೃತಿ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭವಾದ ತಕ್ಷಣ ಮದುವೆ ಮಾಡುವ ದುಡುಕಿನ ನಿರ್ಧಾರಗಳಿಂದ ದೈಹಿಕವಾಗಿ ಗರ್ಭಕೋಶವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಗರ್ಭಪಾತ, ಮಗು ಸತ್ತು ಹುಟ್ಟುವುದು, ದಿನತುಂಬದ ಹೆರಿಗೆ, ಬಾಲ್ಯದಲ್ಲಿ ಅಪೌಷ್ಟಿಕತೆ, ಅಕಾಲಿಕ ಗರ್ಭಧಾರಣೆ, ಹೆರಿಗೆಯಲ್ಲಿನ ತೊಡಕುಗಳು, ಮಗುವಿನ ಲಾಲನೆ ಪಾಲನೆಯ ಮಾಹಿತಿ ಕೊರತೆ ಕಾರಣದಿಂದ ಮಗು ಅಪೌಷ್ಟಿಕತೆಗೆ ತುತ್ತಾಗುತ್ತದೆ. ಈ ಹಿನ್ನಲೆ ಬಾಲ್ಯ ವಿವಾಹ ತಡೆ ಎಲ್ಲರೂ ಶ್ರಮಿಸೊಣವೆಂದು ತಿಳಿಸಿದರು.
ಶಾಲಾ ಮುಖ್ಯಗುರು ಚಿತ್ರಾಬಾಯಿ ಮಾತನಾಡಿ ಬಾಲ್ಯದಲ್ಲಿ ಮದುವೆ ಮಾಡುವುದರಿಂದ ಹೆಣ್ಣು ಮಗು ಕೌಟುಂಬಿಕ ಹಿಂಸೆ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿ. ಅಲ್ಲದೆ ಹೆಣ್ಣು ಮಗುವಿಗೆ 18 ವರ್ಷ ತುಂಬುವುದರೊಳಗೆ ಮದುವೆ ಮಾಡಿದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಗಂಡಿನ ಮನೆಯವರಿಗೆ, ಮದುವೆ ಮಾಡಿಸಿದವರಿಗೆ, ಭಾಗಿಯಾದವರಿಗೆ 1 ಲಕ್ಷ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದರು.
ಈ ವೇಳೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಅವರು ಮಾತನಾಡಿ, ಪ್ರತಿ ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ 10-19 ವರ್ಷಗಳ ವಯೋಮಾನ ಅತ್ಯಂತ ಸೂಕ್ಷ್ಮ ಕಾಲ ಘಟ್ಟವಾಗಿದೆ. ಈ ಹಂತದಲ್ಲಿ ಹಾರ್ಮೋನುಗಳ ಬದಲಾವಣೆಯೊಂದಿಗೆ ಉಂಟಾಗುವ ಧ್ವನಿ ಬದಲಾವಣೆ, ಬಾಲಕರಲ್ಲಿ ಮಿಸೆ ಗಡ್ಡಗಳ ಕಾಣಿಸುವಿಕೆ, ಬಾಲಕಿಯರಲ್ಲಿ ಋತುಚಕ್ರ ಆರಂಭವಾಗುವ ಜೊತೆಗೆ ದೈಹಿಕ ಬದಲಾವಣೆ, ಕಂಕುಳದಲ್ಲಿ ಕೂದಲುಗಳ ಕಾಣಿಸುವಿಕೆ ಸೇರಿದಂತೆ ಮುಖದಲ್ಲಿ ಮೊಡುವೆಗಳು ಕಂಡು ಬರಲಾರಂಬಿಸುತ್ತವೆ. ಇವೆಲ್ಲವುಗಳು ಹದಿಹರೆಯದ ಸಂಕೇತವಾದರೆ, ದೈಹಿಕ ಆಕರ್ಷಣೆಗೆ ಒಳಗಾಗುವ ಸೂಕ್ಷ್ಮ ಅಂಶದ ಕುರಿತು ಅದರ ಸಾಧಕ-ಭಾದಕಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಿದೆ. ಅಲ್ಲದೆ ಮಕ್ಕಳ ಏಳ್ಗೆಗಾಗಿ ಹಗಲಿರಳು ತಂದೆ-ತಾಯಿ ಶ್ರಮಿಸುವುದನ್ನು ನಾವು ಕಾಣುತ್ತೇವೆ. ಮಕ್ಕಳು ಉನ್ನತ ಹುದ್ದೆ, ಸ್ಥಾನಮಾನ ಪಡೆಯಲಿ ಎಂಬ ಮಹಾದಾಸೆ ಇರುತ್ತದೆ. ಈ ದಿಶೆಯಲ್ಲಿ ಸರಿಯಾದ ಪೌಷ್ಟಿಕಾಹಾರ ಸೇವನೆ, ವ್ಯಾಯಾಮ, ಯೋಗಗಳೊಂದಿಗೆ ಶ್ರದ್ಧೆಯಿಂದ ಓದಿನ ಕಡೆ ಗಮನ ನೀಡುವ ಮೂಲಕ ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳು ಮಾತ್ರೆ, ಪ್ರತಿವಾರಕ್ಕೊಮ್ಮೆ ಕಬ್ಬಿಣಾಂಶ ಮಾತ್ರೆ ಸೇವಿಸಿ ದೇಹದಲ್ಲಿ ಕಬ್ಬಿಣಾಂಶದ ಕೊರತೆಯಾಗದಂತೆ ಮುತವರ್ಜಿ ವಹಿಸಬೇಕೆಂದರು.
ಸ್ನೇಹಾ ಕ್ಲಿನಿಕ್ ಸದ್ಭಳಕೆ ಮಾಡಿಕೊಳ್ಳಿ: ರಾಷ್ಟ್ರೀಯ ಕಿಶೋರಿ ಸ್ವಾಸ್ತ್ಯ ಕಾರ್ಯಕ್ರಮದಡಿಯಲ್ಲಿ ಸ್ನೇಹಾ ಕ್ಲಿನಿಕ್‌ಗಳ ಮೂಲಕ ಹದಿಹರೆಯದ ಆರೋಗ್ಯ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆಗಾಗಿ ಆರೋಗ್ಯ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ನಿಲಯ ಪಾಲಕರಾದ ರಂಗನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಭಾನುಕಾಂತ ರೆಡ್ಡಿ, ಹಿರಿಯ ಪಿಹೆಚ್‌ಸಿಓ ರೇಣುಕಾ, ಶಿಕ್ಷಕರಾದ ರಮೇಶ, ಪಿಹೆಚ್‌ಸಿಓ ರಸೂಲ್‌ಬಿ, ಹೆಚ್‌ಐಓ ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಶಂಕ್ರಮ್ಮ, ನಾಗಮ್ಮ ಸೇರಿದಂತೆ ಶಾಲಾ ಮಕ್ಕಳು ಇದ್ದರು.

Leave a Reply

Your email address will not be published. Required fields are marked *