ಮಾನ್ವಿ : ಜ.10 ರಂದು ಶನಿವಾರ ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ನೇತಾಜಿ ಪಿ.ಯು. ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದ್ದು, ಇದರ ಅಂಗವಾಗಿ “ನೇತಾಜಿ ವಿಜ್ಞಾನ ವೈಭವ” ಶೀರ್ಷಿಕೆಯಡಿ ಮೂರು ದಿನಗಳ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಈವರೆಗೆ ನೇತಾಜಿ ಪಿ.ಯು. ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಈ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಭಾಗಕ್ಕೆ ಇಲಾಖೆಯ ಅನುಮತಿ ಲಭಿಸಿದೆ. ಇದು ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ವಿಜ್ಞಾನ ವಿಭಾಗದ ಉದ್ಘಾಟನೆಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನ, ಇತಿಹಾಸ, ಗಣಿತ, ವಾಣಿಜ್ಯ, ಕಲೆ, ಕೃಷಿ, ಸಾಹಿತ್ಯ, ಸಂಸ್ಕೃತಿ, ಭಾಷೆ, ಖಗೋಳಶಾಸ್ತ್ರ, ಭೂಮಿ ಸಂರಕ್ಷಣೆ, ಆಯುರ್ವೇದ, ಅಬ್ಯಾಕಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವರ್ಕಿಂಗ್ ಮಾದರಿಗಳು, ಸ್ಥಿರ ಮಾದರಿಗಳು, ಪ್ರಯೋಗಗಳು, ಪುಷ್ಪ ಪ್ರದರ್ಶನ, ಸೌರ ವ್ಯವಸ್ಥೆ ಮುಂತಾದವು ಸೇರಿ ಒಟ್ಟು 270ಕ್ಕೂ ಹೆಚ್ಚು ಪ್ರದರ್ಶನಗಳು ಇರಲಿವೆ. ಈ ವಿಜ್ಞಾನ ವೈಭವವು ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಂಸ್ಕೃತಿಯ ಸಂಗಮವಾಗಲಿದೆ ಎಂದು ವಿಜಯಲಕ್ಷ್ಮಿ ತಿಳಿಸಿದರು.
ಉದ್ಘಾಟನೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜು, ಶಾಸಕ ಜಿ. ಹಂಪಯ್ಯ ನಾಯಕ, ಪ್ರಥಮ ದರ್ಜೆ ಗುತ್ತೇದಾರ ಎಂ. ಈರಣ್ಣ, ನ.ಯೋ.ಪ್ರಾ. ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಪಿ.ಯು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಹೊಕ್ರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡನಿ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಖಾ.ಶಿ.ಸಂ. ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ಕಾಲೇಜು ಒಕ್ಕೂಟದ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ತಿಮ್ಮಾರೆಡ್ಡಿ ಭೋಗಾವತಿ, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಜಿ. ನಾಗರಾಜ್, ಪುರಸಭೆಯ ಮಾಜಿ ಸದಸ್ಯ ರೌಡೂರು ಸ್ವಾಮಿ, ಹಾಲಿ ಸದಸ್ಯ ಶರಣಪ್ಪ ಮೇಧಾ, ನೌಕರರ ಸಂಘದ ಅಧ್ಯಕ್ಷ ಸುರೇಶ್ ಕುರ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಗಮೇಶ ಮುಧೋಳ, ಪ್ರೌಢ ಶಾಲಾ ಶಿಕ್ಷಕರ ಸಂಘದ ಎಂ. ಅಶೋಕ ಕುಮಾರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಶನಿವಾರ ಮಧ್ಯಾಹ್ನ 1 ಗಂಟೆಗೆ ಆರಂಭಗೊಳ್ಳಲಿದ್ದು, ಅಂದು ಸಂಜೆ 4.30 ಗಂಟೆಯವರೆಗೆ ನಡೆಯಲಿದೆ. ಜೊತೆಗೆ ದಿನಾಂಕ 12 ರ ಸೋಮವಾರ ಹಾಗೂ 13 ರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರಿಗೆ ವಸ್ತು ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯದರ್ಶಿ ಕೆ. ವಿಜಯಲಕ್ಷ್ಮಿ ತಿಳಿಸಿದ್ದಾರೆ.

