ರಾಯಚೂರು ಜನವರಿ 06 (ಕರ್ನಾಟಕ ವಾರ್ತೆ): ಸಾಮಾನ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮುಂಬರಲಿರುವ ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಕ್ಕೆ ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇನ್ನೀತರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜನವರಿ 6ರಂದು ನಡೆದ ತ್ರೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕರು, ಬೇಸಿಗೆ ಅವಧಿಯ ಸಮರ್ಪಕ ನಿರ್ವಹಣೆಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಶಿಸ್ತುಬದ್ಧವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಲಧಾರೆ ಯೋಜನೆಯ ಪ್ರಗತಿಯ ಏನಾಗಿದೆ. ನದಿ ದಂಡೆಯ ಗ್ರಾಮಗಳಿಗೆ ಶುದ್ಧೀಕರಿಸಿದ ನೀರನ್ನು ಕೊಡುತ್ತಿದ್ದೀರಾ ಎಂದು ಶಾಸಕರು ಕೇಳಿದರು. ಜಲಧಾರೆ ಯೋಜನೆಯ ಕಾಮಗಾರಿಗಳ ಬಗ್ಗೆ ಪ್ರಗತಿ ಸಾಧಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅರಳಿಬೆಂಚಿ ಕಾಮಗಾರಿ ಬುನಾದಿ ಹಂತವನ್ನು ನಿರ್ಮಿಸಲಾಗಿದ್ದು ಎಸ್‌ಪಿಟಿ ಡಿಸೈನ್ ಮಾಡಲಾಗಿದೆ. ಗುಂಜಳ್ಳಿ ಗ್ರಾಮದ ಓಎಚ್‌ಟಿ ಟ್ಯಾಂಕ್ ದುರಸ್ಥಿಯಲ್ಲಿದ್ದು ನೆಲಸಮ ಮಾಡಲು ಮತ್ತು ಜಂಬಲದಿನ್ನಿ ಗ್ರಾಮದ ಓಎಚ್‌ಟಿ ಟ್ಯಾಂಕ್ ನಿರ್ಮಾಣಕ್ಕೆ ಬೇರೆ ಸ್ಥಳ ಗುರುತಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ನದಿ ದಂಡೆಯ ಗ್ರಾಮಗಳಿಗೆ ಶುದ್ಧೀಕರಿಸಿ ನೀರು ಸರಬರಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಅತ್ಕೂರು ಕೆರೆ ಮತ್ತು ಕಲಮಲಾ ಕೆರೆಯ ಕಾರ್ಯಗಳ ಬಗ್ಗೆ ಶಾಸಕರು ಕೇಳಿದರು. ಅತ್ತೂರ ನದಿ ದಡದ ಕೆರೆಗೆ ನೀರು ತುಂಬಿಸಲು 24*7 ವಿದ್ಯುತ್ ಲೈನ್ ನೀಡಲು ಕಾಮಗಾರಿಗಳ ಅಂದಾಜು ಪತ್ರಿಕೆಗಳನ್ನು ಜೆಸ್ಕಾಂ ಇಲಾಖೆಯವರು ನೀಡಿದ್ದು ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಲಮಲಾ ಕೆರೆಯ ವಿದ್ಯುತ್ ಕಾಮಗಾತಿಯು ಮುಕ್ತಾಯ ಹಂತದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಕೃಷಿ ಇಲಾಖೆಯ ಚಟುವಟಿಕೆಗಳ ಬಗ್ಗೆ ಶಾಸಕರು ಕೇಳಿದರು. ಮುಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಸುರಿದ ಮಳೆಯಿಂದಾಗಿ ಬೆಳೆಹಾನಿಯಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು ಬೆಳೆಹಾನಿ ವರದಿ ಸಲ್ಲಿಸಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 10,672 ಹೆಕ್ಟೇರ್
ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ನ್ಯಾನೋ ಯೂರಿಯಾ ಬಳಕೆ ಹಾಗೂ ಪ್ರಯೋಜನೆಗಳ ಬಗ್ಗೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ತರಬೇತಿ ನಡೆಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಶಾಸಕರು ಕೇಳಿದರು. ರಾಯಚೂರು ತಾಲೂಕಿನ ಗ್ರಾಮೀಣ ಭಾಗದ ಒಟ್ಟು 27 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು. ಗ್ರಾಮ ಮತ್ತು ಜನಸಂಖ್ಯೆಯನುಸಾರ ಅಗತ್ಯವಿರುವ ಕಡೆಗೆ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಕ್ಕೆ ಮಾರ್ಪಾಡು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಶಾಸಕರು ಬಿಇಓ ಅವರಿಗೆ ಸೂಚನೆ ನೀಡಿದರು.
ಸಿಂಗನೋಡಿ ಟ್ರಿ ಪಾರ್ಕ್ ಹಾಗೂ ಗಾಣದಾಳ ದೈವವನ ಕಾರ್ಯದ ಬಗ್ಗೆ ಶಾಸಕರು ಕೇಳಿದರು. ಯರಗೇರಾ ಟ್ರಿ ಪಾರ್ಕ ರೂ. 93.1055 ಮಂಜೂರಾಗಿರುತ್ತದೆ. ಸಿಂಗನೋಡಿ ಟ್ರಿ ಪಾರ್ಕ, ಗಾಣದಾಳ ದೈವಿವನಕ್ಕೆ ಡಿಪಿಆರ್ ಮಾಡಿ ಕಳುಹಿಸಿದ್ದು ಈ ಡಿಪಿಆರ್‌ಗೆಳಿಗೆ ಅನುಮೋದನೆ ಸಿಕ್ಕಿದೆ. ಪ್ರಸ್ತುತ ವರ್ಷ ಸಿಂಗನೋಡಿ ಟ್ರಿ ಪಾರ್ಕಗೆ 50 ಲಕ್ಷ ರೂ. ಹಾಗೂ ಪಂಚಮುಖಿ ಗಾಣದಾಳ ದೈವಿವನಕ್ಕೆ 19 ಲಕ್ಷ ರೂ ಅನುದಾನ ಮಂಜೂರಾತಿಗೆ ಆದೇಶವಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಡಾ.ಸಂಗಣ್ಣ, ತಹಸೀಲ್ದಾರ ಸುರೇಶ ವರ್ಮಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪವಾರ, ರಾಯಚೂರು ಒಕ್ಕುಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಂಘದ ಅಧ್ಯಕ್ಷರಾದ ಜಯವಂತರಾವ್ ಪತಂಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
