ತಾಳಿಕೋಟಿ: ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮಲಿಂಗೇಶ್ವರ ಮಠ ಹಾಗೂ ಸಭಾಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಇವರಿಗೆ ಆಮಂತ್ರಣ ನೀಡಲಾಯಿತು. ಸೋಮವಾರ ಪರಮಪೂಜ್ಯರ ನೇತೃತ್ವದಲ್ಲಿ ವಿಜಯಪುರ ನಗರದಲ್ಲಿರುವ ಸಚಿವ ಶಿವಾನಂದ ಪಾಟೀಲ ಇವರ ಗೃಹಕ್ಕೆ ತೆರಳಿದ ನಿಯೋಗವು ನೂತನ ಮಠ ಹಾಗೂ ಸಭಾಭವನದ ಉದ್ಘಾಟನೆ ಅಂಗವಾಗಿ ಫೆಬ್ರವರಿ 7ರಂದು ನಡೆಲಿರುವ ಸದ್ಧರ್ಮ ಸಮಾರಂಭದಲ್ಲಿ ಭಾಗವಹಿಸಲು ಅವರನ್ನು ವಿನಂತಿಸಿಕೊಂಡರು. ಪರಮಪೂಜ್ಯರ ನಿಯೋಗದ ಆಮಂತ್ರಣವನ್ನು ಗೌರವ ಪೂರ್ಣವಾಗಿ ಒಪ್ಪಿಕೊಂಡ ಸಚಿವ ಶಿವಾನಂದ ಪಾಟೀಲ ಅವರು ಫೆಬ್ರವರಿ 7ರಂದು ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸವುದಾಗಿ ಒಪ್ಪಿಗೆಯನ್ನು ಸೂಚಿಸಿದರು. ನಿಯೋಗದಲ್ಲಿ ಕೊಡೆಕಲ್ಲ ದುರದುಂಡೇಶ್ವರ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ನಾವದಗಿ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಬಸವನ ಬಾಗೇವಾಡಿಯ ಶಿವಪ್ರಕಾಶ ಮಹಾಸ್ವಾಮಿಗಳು, ಮನಗೂಳಿಯ ಸಂಗನಬಸವ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಜಡಿಮಠದ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಚಬನೂರಿನ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕೋಲಾರದ ಪ್ರಭುಕುಮಾರ ಮಹಾಸ್ವಾಮಿಗಳು, ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹಾಗೂ ದತ್ತು ಹೊಸಮಠ ಇದ್ದರು.

