ಮಾನ್ವಿ: ಎಸ್ಎಸ್ಎಲ್ಸಿ ಫಲಿತಾಂಶ ಸಾಧನೆಗಾಗಿ ವಿಜ್ಞಾನ ವಿಷಯ ಶಿಕ್ಷಕರು ವಿಶೇಷ ಕಲಿಕಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು.

 

ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾನವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ವಿಷಯ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರು ಎರೆದು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಸದಾ ಕೌತುಕ, ಹೊಸತನದಿಂದ ಕೂಡಿದ್ದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಕುರಿತಾದ ಹಚ್ಚಿನ ಅಭ್ಯಾಸ, ಜ್ಞಾನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿಜ್ಞಾನ ವಿಷಯ ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನ ವಿಷಯ ಕುರಿತು ಆಸಕ್ತಿ ಹುಟ್ಟಿಸುವ ಮೂಲಕ ವಿಶೇಷ ಮಾದರಿ ಪ್ರಯೋಗ ಚಟುವಟಿಕೆಗಳನ್ನು ಶಾಲೆಗಳಲ್ಲಿ ಮಾಡುವದು ಅಗತ್ಯವಾಗಿದೆ. ಅ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯ ಕುರಿತು ಕುತೂಹಲ ಹೆಚ್ಚಾಗಿ ನಿರಂತರ ಅಭ್ಯಾಸದಲ್ಲಿ ತೊಡಿಕೊಂಡಾಗ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಿದೆ ಎಂದರು.

ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯ ದೃಷ್ಟಿಯಿಂದ

ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾನ್ವಿ ತಾಲೂಕಿಗೆ ವಿಶೇಷ ಆದ್ಯತೆಯನ್ನು ನೀಡಿ ಈ ಬಾರಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಮಕ್ಕಳ ಕಲಿಕೆಗೆ ಉಪಯುಕ್ತವಾದ ಶಾಲೆಗಳಲ್ಲಿ ವಿಜ್ಞಾನ ವಸ್ತುಗಳ ಪ್ರದರ್ಶನ ಮತ್ತು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ವಿಷಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ದೈಹಿಕ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಾಗಾರ ದಂತಹ ಮಹತ್ವದ ಕಾರ್ಯಕ್ರಮಗಳನ್ನು ನೀಡಿರುವದು ಶ್ಲಾಘನೀಯವಾಗಿದೆ. ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಳಕ್ಕೆ ಪ್ರತಿಯೊಬ್ಬ ಶಿಕ್ಷಕರು ವಿಷಯವಾರು ಹೆಚ್ಚಿನ‌ಕಾಳಜಿ ವಹಿಸಬೇಕಿದೆ. ವೈಯಕ್ತಿಕ ವಿಚಾರ ಕಾರ್ಯಗಳನ್ನು ಬದಿಗಟ್ಟು ಮಕ್ಕಳ ಫಲಿತಾಂಶ ಸಾಧನೆಗೆ ಆದ್ಯತೆ ನೀಡಬೇಕು. ಸಿ‌ ಮತ್ತು ಸಿ+ ವಿದ್ಯಾರ್ಥಿಗಳಿಗೆ 40+ ವಿಜನ್ ಅನುಷ್ಠಾನಕ್ಕೆ ತಂದು ಎಲ್ಲಾ ವಿದ್ಯಾರ್ಥಿಗಳ ಉತ್ತೀರ್ಣಕ್ಕಾಗಿ ಶ್ರಮಿಸಬೇಕಿದೆ. ಎಲ್ಲಾ ವಿಷಯ ಶಿಕ್ಷಕರ ಕುರಿತಾಗಿ ಶಾಲೆ ಮುಖ್ಯ ಶಿಕ್ಷಕರು ನಿಗಾ ವಹಿಸಿ ಫಲಿತಾಂಶ ಹೆಚ್ಚಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಪೂರ್ವಸಿದ್ಧತಾ ಪರೀಕ್ಷೆ ತಯಾರಿ ಸೇರಿದಂತೆ ಎಫ್ಎ ಪರೀಕ್ಷೆಗಳ ಫಲಿತಾಂಶ ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಇಲಾಖೆಗೆ ನೀಡುವಂತೆ ಸೂಚಿಸಿದರು.

ನಂತರ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕನ್ಯಾಶಾಲೆಯ ಸಹ ಶಿಕ್ಷಕಿ ರೇಖಾ, ಮದ್ಲಾಪೂರು ಸಹ ಶಿಕ್ಷಕ ಸಂದೀಪ, ಅತ್ತನೂರು ಶಾಲೆ ಸಹ ಶಿಕ್ಷಕಿ ಉಮಾ, ಮಧು ವಿಜ್ಞಾನ ವಿಷಯ ಕುರಿತು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ತಾಲೂಕ ನೋಡಲ್ ಅಧಿಕಾರಿ ಹನುಮೇಶ ನಾಯಕ, ಇಸಿಒ ಗಳಾದ ಮಹೇಶ, ಸಂತೋಷ,ತರಬೇತಿ ನೋಡಲ್ ಅಧಿಕಾರಿ ಸಿದ್ಧಲಿಂಗೇಶ್ವರ ಸೇರಿದಂತೆ ವಿಜ್ಞಾನ ವಿಷಯ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *