ಸಿರವಾರ: ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸೇತುವೆ ನಿರ್ಮಾಣ ಹಾಗೂ ಹರಿಯುವ ಹಳ್ಳಗಳಿಗೆ ಚೆಕ್ ಡ್ಯಾಮ್ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದರು.
ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿರವಾರ ತಾಲೂಕಿನ ನುಗುಡೋಣಿಯಿಂದ ಎನ್ ಹೊಸೂರು ಸಂಪರ್ಕಿಸುವ ರಸ್ತೆಗೆ ಹರಿಯುವ ಹಳ್ಳಕ್ಕೆ 2 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಎನ್ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಕೆರೆಗಳ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿ ಜಿಲ್ಲೆಯಾದ್ಯಂತ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ರೈತರು ನೀರಿಗಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕೆಲವೆಡೆ ಕೃಷಿ ಚಟುವಟಿಕೆಗಳಿಗಾಗಿ ರೈತರು ಕೆರೆ ಹಾಗೂ ಹರಿಯುವ ಹಳ್ಳಗಳ ಮೇಲೆ ಅವಲಂಬಿತರಾಗಿದ್ದಾರೆ ಹಾಗಾಗಿ ಕೆರೆ-ಕಟ್ಟೆಗಳ ಸಂರಕ್ಷಣೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚುಕ್ಕಿ ಚುಗಪ್ಪ ಸಾಹುಕಾರ್ ಶರಣಯ್ಯ ನಾಯಕ್ ಗುಡದಿನ್ನಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಿರಲಿಂಗಪ್ಪ, ಮಲ್ಲಿಕಾರ್ಜುನ ಮಲ್ಲಟ್, ಶಿವಪ್ಪ, ಶಿವಕುಮಾರ್ ಅನೇಕರು ಉಪಸ್ಥಿತರಿದ್ದರು.

