ರಾಯಚೂರು : ‘ಗುಬ್ಬಚ್ಚಿ ಗೂಡು ಹೆಣೆಯುವಂತೆ ನವಿರತೆ, ಕಟ್ಟುವ ಕಲೆ ಸಿದ್ದಿಸಿದ ಕವಿಗೆ ಕಾವ್ಯ ಒಲಿಯುತ್ತದೆ’ ಎಂದು ಕವಿ ರಮೇಶ ಅರೋಲಿ ಹೇಳಿದರು‌.
ನಗರದ ಆಕಾಶವಾಣಿ ಕೇಂದ್ರದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಬಾನುಲಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು,’ಕವಿತೆ ಏಕಾಂತದ ಪಿಸುಮಾತು ಮತ್ತು ಸಮುದಾಯಿಕವಾಗಿ ಹುಟ್ಟುವ ಗಾನ, ಎಲ್ಲಾ ಅಭಿವ್ಯಕ್ತಿಯ ತುತ್ತತುದಿ ಅದು ಕಾವ್ಯ ಪ್ರಕಾರವಾಗಿದೆ.
ಭಿನ್ನ ಅಭಿವ್ಯಕ್ತಿಯ ಪ್ರಕಾರಗಳು ಇದ್ದರೂ ಸಹಿತ ಕವಿತೆಗೆ ಪ್ರಾಮುಖ್ಯತೆ ಸಿಕ್ಕಿದೆ’ ಎಂದರು.

‘ಪ್ರಪಂಚದ ಶ್ರೇಷ್ಠ ಕೃತಿಕಾರರನ್ನು ನೋಡಿದಾಗ, ವಿಲಿಯಂ ಷೇಕ್ಸ್ಪಿಯರ್‌ನಂಥ ಶ್ರೇಷ್ಠ ಕವಿಗಳು ಗಡಿ ಎಲ್ಲೆಗಳನ್ನು ಮೀರಿ ಬೆಳೆದು ನಮಗೆ ತಲುಪಿದ್ದು, ಮತ್ತು ಮನುಷ್ಯನ ಮೂಲಭೂತ ಗುಣ, ಮನುಷ್ಯನ ಸ್ವಾಭಾವಿಕ ನಡೆಗಳು ಆತನ ಆಲೋಚನೆ ಮತ್ತು ಮಹತ್ವಾಕಾಂಕ್ಷೆಗಳ ಬಗ್ಗೆ ಬರೆದ ಕಾರಣಕ್ಕೆ ಗಡಿ ಎಲ್ಲಿಗಳನ್ನು ಮೀರಿ ಒಬ್ಬ ಮಹಾಕವಿ ತಲುಪುತ್ತಾನೆ. ಅದು ಕವಿತೆಗೆ ಇರುವಂತಹ ಶಕ್ತಿ ಎಂದರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಧಾರವಾಡದ ಸಾಹಿತಿ ಟಿ. ಎಸ್. ಗೊರವರ ಮತ್ತು ಕಥೆಗಾರ ಅಮರೇಶ ಗಿಣಿವಾರ ಮಾತನಾಡಿದರು. ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು.

ಕವಿಗೋಷ್ಠಿಯಲ್ಲಿ ಪಾಲ್ಗೊಂಡ 15 ಕವಿಗಳು ಕವಿತೆ ವಾಚಿಸಿದರು. ಆಕಾಶವಾಣಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಅರವಿಂದ, ಸಿಬ್ಬಂದಿ ನಾಗಮಣಿ, ಅರಸು, ಆಂಜನೇಯ, ಶ್ರೀನಿವಾಸ ಕುಲ್ಕರ್ಣಿ, ನಾಗರತ್ನ, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯಶ್ರೀ ನಿರೂಪಿಸಿದರು. ರಮಾ ಕುಲಕರ್ಣಿ ಪ್ರಾರ್ಥಿಸಿದರು. ಪರಮೇಶ್ವರಪ್ಪ ಗೋಪಿಶೆಟ್ಟಿ ಸ್ವಾಗತಿಸಿದರು. ವೀರೇಶ್ ವಂದಿಸಿದರು.

Leave a Reply

Your email address will not be published. Required fields are marked *